

ಕೋಲಾರ: ಕೆ.ಸಿ.ವ್ಯಾಲಿ ನೀರು ಬೆಳೆಗಳಿಗೆ ಮಾರಕವಾಗಿದೆ. ಇದರಿಂದ ಬೆಳೆಗಳು ಹಾಳುಗುತ್ತಿವೆ. ಹಾಗೂ ವೈರಸ್ ಹೆಚ್ಚಾಗುತ್ತಿದೆ ಎಂದು ರೈತರು ಹಾಗೂ ಸಂಘ&ಸಂಸ್ಥೆಯವರು ಇತ್ತೀಚೆಗೆ ಮಾಡುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ಕೋಲಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆಗಳನ್ನು ಪರಿಶೀಲಿಸಿ ಬೆಳೆಗಳ ಮಾದರಿ ಸಂಗ್ರಹಿಸಿದರು.
ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಹರಿಯುತ್ತಿರುವ ನೀರಿನ ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಸುಗಟೂರು ಹೋಬಳಿಯ ತುರಾಂಡಹಳ್ಳಿಯ ಪ್ರಗತಿಪರ ರೈತ ಟಿ.ಎನ್.ರವಿ ಅವರ ತೋಟಕ್ಕೆ ಭೇಟಿ ನೀಡಿ, ಟೊಮ್ಯಾಟೊ, ಬೀನ್ಸ್, ಕ್ಯಾಪ್ಸಿಕಂ, ಬದನೇಕಾಯಿ, ಕ್ಯಾರೆಟ್ ಮಾದರಿ ಸಂಗ್ರಹಿಸಿದರು.
ಭೇಟಿ ನೀಡಿದ ಅಧಿಕಾರಿಗಳ ತಂಡದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿ ರಾಜು, ಜಿಕೆವಿಕೆ ಪ್ರಾಧ್ಯಾಪಕ ಡಾ.ಬಿ.ಜಿ.ವಾಸಂತಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಶಿಕುಮಾರ್ ಇದ್ದರು.
ಬೆಳೆಗಳ ಮಾದರಿ ಪಡೆಯಲಾಗಿದ್ದು, ಲ್ಯಾಬಿಗೆ ಕಳುಹಿಸಲಾಗುವುದು. ವರದಿ ಬಂದ ನಂತರ ಕೆ.ಸಿ.ವ್ಯಾಲಿ ನೀರಿನಿಂದ ತೊಂದರೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲಿಯವರೆವಿಗೂ ಅನೇಕ ಬಾರಿ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆ.ಸಿ.ವ್ಯಾಲಿ ನೀರಿನಿಂದ ಯಾವುದೇ ತೊಂದರೆ ಇಲ್ಲ ಎಂಬ ವರದಿ ಬಂದಿದೆ. ಮತ್ತೆ ಮತ್ತೊಂದು ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಗಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು ತಿಳಿಸಿದ್ದಾರೆ.
ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ, ಪ್ರಗತಿಪರ ರೈತ ರವಿ ಹಾಗೂ ಸ್ಥಳಿಯ ರೈತರು ಇದ್ದರು.