

ಕೋಲಾರ: ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುತ್ತಿರುವುದು ಸುತ್ತಮುತ್ತಲ ರೈತರಿಗೆ ವರದಾನವಾಗಿದ್ದರೂ ತಾಲೂಕಿನ ಗಡಿ ಗ್ರಾಮ ಮುಳ್ಳಹಳ್ಳಿಯ ಜಮೀನುಗಳಿಗೆ ಕೆಸಿ ವ್ಯಾಲಿ ನೀರು ನುಗ್ಗಿ ರೈತರಿಗೆ ಭಾರಿ ನಷ್ಟವಾಗಿದೆ.
ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಬಗಳಹಳ್ಳಿಯ ಕೆರೆಗೆ ಕಳೆದ ನಾಲ್ಕು ತಿಂಗಳಿಂದ ಕೆಸಿ ವ್ಯಾಲಿ ನೀರು ಹರಿಸಲಾಗುತ್ತಿದ್ದು, ಇಲ್ಲಿಂದ ಆ ತಾಲೂಕಿನ ಇತರ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿದುಹೋಗುತ್ತದೆ. ಬಗಳಹಳ್ಳಿ ಗಡಿಗೆ ಹೊಂದಿಕೊಂಡಂತೆ ಕೋಲಾರ ತಾಲೂಕಿನ ಸುಗಟೂರು ಹೋಬಳಿಯ ಮುಳ್ಳಹಳ್ಳಿ ಗ್ರಾಮವಿದೆ. ಬಗಳಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿದ್ದು, ಸರ್ವೇ ನಂ.27ರಲ್ಲಿ 27.027 ಎಕರೆ ಜಮೀನಿದೆ.
ಬಗಳಹಳ್ಳಿ ಕೆರೆ ಕೋಡಿ ಎತ್ತರ ಮಾಡಿರುವುದರಿಂದ ಕೆರೆ ಗಡಿಯಲ್ಲಿರುವ ಮುಳ್ಳಹಳ್ಳಿಯ ಸರ್ವೇ ನಂ 10/1,10/2, 11, 12/1, 12/2, 12, 12/5, 12/7 13, 14. 15, 16,17 ಹಾಗೂ 18ರಲ್ಲಿನ ಹತ್ತಾರು ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಸುಮಾರು 3 ಅಡಿಗಳಷ್ಟು ನೀರು ನಿಂತು ಬೆಳೆ, ಮಾವಿನ ಮರಗಳು ಹಾನಿಗೀಡಾಗಿವೆ. ಗ್ರಾಮದ ಶ್ರೀನಿವಾಸರೆಡ್ಡಿ ಅವರ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 120 ಮಾವಿನ ಗಿಡ, ಎಂ.ಎನ್.ನಾಗರೆಡ್ಡಿ ಅವರ 1 ಎಕರೆ ಹಿಪ್ಪುನೇರಳೆ ತೋಟ, ಮಾವಿನ ತೋಟ, ಎಂ.ಎನ್.ಸುಬ್ಬಾರೆಡ್ಡಿ ಅವರ ರಾಗಿ ಹೊಲ ಹಾಗೂ 1 ಕೆರೆಯಲ್ಲಿ ಬೆಳೆದಿದ್ದ ಮಾವಿನ ಗಿಡ ಸೇರಿ ರೈತರ ಕೃಷಿ ಹೊಂಡ, ಕೊಳವೆಬಾವಿ ಹೀಗೆ ಸುಮಾರು 15 ಎಕರೆ ಪ್ರದೇಶದಲ್ಲಿ ರೈತರ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ಶೆಡ್‌ಗಳು ಹಾನಿಗೀಡಾಗಿದ್ದು, ನಷ್ಟ ಅನುಭವಿಸುವಂತಾಗಿದೆ.
ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಬಗಳಹಳ್ಳಿ ಗ್ರಾಮಸ್ಥರ ಗಲಾಟೆಯಿಂದ ಕೋಡಿ ತೆಗಿಸಿಲ್ಲ ಎಂದು ದೂರಿರುವ ಗ್ರಾಮಸ್ಥರು ಕೋಡಿಯನ್ನು 3 ಅಡಿ ಕೆಳಕ್ಕೆ ಇಳಿಸಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ತಿಂಗಳಿಂದ ನಮ್ಮ ಜಮೀನಿನಲ್ಲಿ ನೀರು ನಿಂತು ಹಲವು ರೈತರ ತೋಟ, ಬೆಳೆ ಹಾಳಾಗಿವೆ. ಈ ಬಗ್ಗೆ ತಹಸೀಲ್ದಾರ್, ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಪರಿಶೀಲಿಸಿ ಕ್ರಮ ವಹಿಸುವಂತೆ ಸ್ವತಃ ಜಿಲ್ಲಾಧಿಕಾರಿಗಳೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಈವರೆಗೆ ಕ್ರಮ ವಹಿಸಿಲ್ಲ. ಶ್ರೀನಿವಾಸರೆಡ್ಡಿ, ಮುಳ್ಳಹಳ್ಳಿ ಗ್ರಾಮಸ್ಥ ಬಗಳಹಳ್ಳಿ ಕೆರೆ ಜಿಪಂ ವ್ಯಾಪ್ತಿಗೆ ಒಳಪಟ್ಟಿದ್ದು. ಕೆಸಿ ವ್ಯಾಲಿ ನೀರು ಕೋಡಿಯಿಂದ ಹೆಚ್ಚುವರಿಯಾಗಿ ಹರಿಯುತ್ತಿರುವ ನೀರು ಪಕ್ಕದ ಜಮೀನಿನಲ್ಲಿ ಸಂಗ್ರಹವಾಗಿರುವುದು ಗಮನಕ್ಕೆ ಬಂದಿದೆ. ಗೇಟ್ ಎತ್ತರ ತಗ್ಗಿಸುವ ಪ್ರಯತ್ನ ನಡೆದಿದೆ. ಗ್ರಾಮಸ್ಥರಿಂದ ಸಹಕಾರ ಸಿಕ್ಕರೆ ಎಲ್ಲ ಅನುಕೂಲ ಮಾಡಿಕೊಡಲು ಸಿದ್ಧ. ಎಂ.ಕೃಷ್ಣ ಎಇ, ಸಣ್ಣ ನೀರಾವರಿ ಇಲಾಖೆ(ಕೆಸಿ ವ್ಯಾಲಿ)