

ಮೂಡಿಗೆರೆ: ಪಕ್ಷದ ಆಂತರಿಕ ಒಪ್ಪಂದದಂತೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಸ್ತುತ ಅವಧಿ 7 ತಿಂಗಳು ಬಾಕಿ ಇದ್ದು, ಉಳಿದ ಅವಧಿಗೆ ಮತ್ತೊಬ್ಬರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ತಾಪಂನಲ್ಲಿ ಬಿಜೆಪಿ ಸರಳ ಬಹುಮತ ಹೊಂದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಳಗುಳ ಕ್ಷೇತ್ರದ ಸದಸ್ಯ ಕೆ.ಸಿ. ರತನ್ಗೆ 4 ವರ್ಷ, ಕೊನೆಯ ಒಂದು ವರ್ಷ ಬಿದರಹಳ್ಳಿ ಕ್ಷೇತ್ರದ ಭಾರತೀ ರವೀಂದ್ರ ಅವರಿಗೆ ಎಂದು ಪಕ್ಷದಲ್ಲಿ ಅಧಿಕಾರ ಹಂಚಿಕೆ ಸೂತ್ರ ರೂಪಿಸಲಾಗಿತ್ತು.
ಒಪ್ಪಂದದಂತೆ 4 ವರ್ಷ ಪೂರ್ಣಗೊಳಿಸಿದ ನಂತರ ರತನ್ ರಾಜೀನಾಮೆ ನೀಡದ ಕಾರಣ ಪಕ್ಷದ ಸದಸ್ಯರಲ್ಲಿ ಅಸಮಾಧಾನ ಉಂಟಾಗಿತ್ತು. ಜಿಪಂ ಅಧ್ಯಕ್ಷರ ರಾಜೀನಾಮೆ ಪ್ರಹಸನ ಪಕ್ಷಕ್ಕೆ ಮುಜುಗರ ತಂದಿದ್ದು, ಮೂಡಿಗೆರೆ ತಾಪಂನಲ್ಲೂ ಅದೇ ಸ್ಥಿತಿ ನಿರ್ವಣವಾಗಬಾರದು ಎಂದು ಪಕ್ಷದ ಮುಖಂಡರು ಹೇಳಿದ್ದರಿಂದ ರತನ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ರಾಜೀನಾಮೆ ಅಂಗೀಕಾರವಾದ ನಂತರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಬೀಳಲಿದೆ.