ಮುನಿರತ್ನ, ರಮೇಶ್​ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು: ಸಚಿವ ನಾರಾಯಣ ಗೌಡ ಪ್ರಶ್ನೆ

Muni Jaraki
Published on

ಮೈಸೂರು: ಶಾಸಕರಾದ ಮುನಿರತ್ನ ಮತ್ತು ರಮೇಶ್​ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು ಎಂದು ಸಚಿವ ಕೆ.ಸಿ. ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುನಿರತ್ನ ವಿರುದ್ಧ ಕೇಸ್ ಈಗಾಗಲೇ‌ ಇತ್ಯರ್ಥವಾಗಿದೆ ಮತ್ತು ರಮೇಶ್​ ಜಾರಕಿಹೊಳಿ ಕೇಸ್ ಕೂಡ ಇತ್ಯರ್ಥ ಆಗಲಿದೆ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು, ಯಾವುದೇ ಸಿಎಂ ಬದಲಾವಣೆ ಆಗಲ್ಲ. ಮುಂದಿನ ಎರಡು ವರ್ಷ ಬಿಎಸ್‌ವೈ ಸಿಎಂ ಆಗಿರ್ತಾರೆ. ಮುಂದಿನ ಚುನಾವಣೆ ಸಹ ಅವರ ನೇತೃತ್ವದಲ್ಲೇ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಯಾರ್ಯಾರೋ ದೆಹಲಿಗೆ ಹೋಗಿ ಬಂದಿದ್ದಾರೆ‌ ಎಂದು ಕೇಳಿದ್ದಕ್ಕೆ, ದೆಹಲಿ ಪ್ರವಾಸ ಮಾಡಬಾರದೆಂದು ನಿಯಮ ಇದೆಯಾ? ಅವರವರ ಕೆಲಸಕ್ಕೆ ಹೋಗಿ ಬಂದಿದ್ದಾರೆ‌. ಜಾರಕಿಹೊಳಿಗೆ ಬಾಂಬೆಯಲ್ಲಿ ಸ್ವಂತ ಮನೆ ಇದೆ. ಅವರು ಅಲ್ಲೇ ಆಫೀಸ್ ಮಾಡಿದ್ದಾರೆ. ಅವರ ಏರಿಯಾದಲ್ಲೇ ದೇವೇಂದ್ರ ಫಡ್ನವೀಸ್ ಮನೆ ಇದೆ. ಹೀಗಾಗಿ ಆಗಾಗ್ಗೆ ಫಡ್ನವೀಸ್, ಜಾರಕಿಹೊಳಿ ಭೇಟಿ ಆಗ್ತಾರೆ ಎಂದು ಹೇಳಿದರು.

ನೂರು ಕಿಟ್ ಕೊಡೋಕೆ ಸಾವಿರ ಜನ ಸೇರಿಕೊಂಡು ರಾಜಕಾರಣ ಮಾಡ್ತಾರೆ. ಕರೊನಾ ಇನ್ನೂ ನಿಯಂತ್ರಣಕ್ಕೆ ಬಂದೇ‌ ಇಲ್ಲ‌. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಕಾ? ಅದಕ್ಕಾಗಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಮೈಸೂರಿನಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net