

ಧಾರವಾಡ: ವೃತ್ತಿ ರಂಗಭೂಮಿ ಕಲೆ ಉಳಿಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಸರ್ಕಾರದ ಅನುದಾನ ಎರಡೂ ಮುಖ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ್ ಅಂಗಡಿ ಹೇಳಿದರು.
ಇಲ್ಲಿನ ಸಿಬಿಟಿ ಬಳಿ ಕೆ.ಬಿ.ಆರ್. ಡ್ರಾಮಾ ಕಂಪನಿ ನೂತನವಾಗಿ ಆರಂಭಿಸಿರುವ ಹೆಂಡ್ತಿನ ಕೇಳಿ ಮದುವೆಯಾಗು ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ವೃತ್ತಿರಂಗಭೂಮಿ ಅತ್ಯಂತ ಹೆಚ್ಚು ಕ್ರಯಾಶೀಲವಾಗಿ ಕೆಲಸ ಮಾಡಿದೆ. ಒಟ್ಟಾರೆ ವೃತ್ತಿ ರಂಗಭೂಮಿ ಕ್ಷೇತ್ರಕ್ಕೆ ಕೆ.ಬಿ.ಆರ್. ಡ್ರಾಮಾ ಕಂಪನಿ ನೀಡಿದ ಕೊಡುಗೆ ದೊಡ್ಡದು. ಹೀಗಾಗಿ ಈ ಕಂಪನಿಯ ನಾಟಕಗಳನ್ನು ನೋಡುವ ಮೂಲಕ ಎಲ್ಲರೂ ಪ್ರೋತ್ಸಾಹ ನೀಡಬೇಕಿದೆ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಕೆ.ಬಿ.ಆರ್. ಡ್ರಾಮಾ ಕಂಪನಿ ಅತ್ಯಂತ ಉತ್ಕೃಷ್ಠ ನಟನೆ ಮತ್ತು ಮನರಂಜನೆಗೆ ಹೆಸರಾದ ಕಂಪನಿ. ಈ ಕಂಪನಿ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ನೀಡಿದ ಪ್ರದರ್ಶನಗಳನ್ನು ಈ ಭಾಗದ ಎಲ್ಲ ಕಲಾರಸಿಕರು ನೋಡಿದ್ದು ವಿಶೇಷ. ಇಂತಹ ಕಂಪನಿಗಳಿಗೆ ಅಗತ್ಯ ಅನುದಾನ ಸೇರಿ ಎಲ್ಲ ಸಹಕಾರ ನೀಡಬೇಕಿದೆ ಎಂದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್ ಮಾತನಾಡಿ, ಕೆಬಿಆರ್ ಡ್ರಾಮಾ ಕಂಪನಿ ಶತಮಾನೋತ್ಸವ ಹೊಸ್ತಿಲಲ್ಲಿ ಇದೆ. ಒಂದು ಕಂಪನಿ ಒಂದು ಶತಮಾನದ ವರೆಗೂ ಕನ್ನಡ ನಾಡು ನುಡಿ ಮತ್ತು ರಂಗಭೂಮಿ ಸಂಸ್ಕೃತಿಯನ್ನು ಬೆಳೆಸಿದೆ ಎಂದರೆ ಅದರ ಮಹತ್ವವನ್ನು ಎಲ್ಲರೂ ತಿಳಿಯಬೇಕು. ಸರ್ಕಾರ ಕೂಡಲೇ ಈ ಇಂತಹ ಕಂಪನಿಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದಶಕ ಕುಮಾರ ಬೆಕ್ಕೇರಿ, ಕೆಬಿಆರ್ ಡ್ರಾಮಾ ಕಂಪನಿ ಮುಖ್ಯಸ್ಥ ಚಿಂದೋಡಿ ಶ್ರೀಕಂಠೇಶ, ಶಶಿಧರ್ ತೋಡಕರ್, ಶಂಕರ ಕುಂಬಿ, ಶಂಕರ ಬಸವರಡ್ಡಿ, ಪ್ರಭು ಹಂಚಿನಾಳ ಇದ್ದರು.