ಕೆ.ಬಿ. ಗಣಪತಿ ಅವರಿಗೆ ಶ್ರದ್ಧಾಂಜಲಿ

KBG
Published on

ಮಡಿಕೇರಿ:

ಕೊಡಗು ಮೂಲದ ಹಿರಿಯ ಪತ್ರಕರ್ತ ಕಲ್ಯಾಟಂಡ ಗಣಪತಿ ಅವರ ನಿಧನಕ್ಕೆ ಕೊಡಗು ಪತ್ರಕರ್ತರ ಸಂಘದಿAದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜಿ. ರಾಜೇಂದ್ರ, ಮೇರು ವ್ಯಕ್ತಿತ್ವದ ಗಣಪತಿಯವರ ಅಗಲಿಕೆ ಪತ್ರಿಕೋದ್ಯಮ ಮಾತ್ರವಲ್ಲದೇ ಸಮಾಜಕ್ಕೂ ಸಾಕಷ್ಟು ನಷ್ಟ ಉಂಟು ಮಾಡಿದೆ. ಯಾರನ್ನೂ ದ್ವೇಷಿಸದ, ಯೂರನ್ನೂ ದೂಷಿಸದ ಗಣಪತಿ ಅವರಲ್ಲಿದ್ದ ಸದ್ಗುಣ ಇತರರಿಗೂ ಆದರ್ಶಪ್ರಾಯವಾದದ್ದು. ಮಾಧ್ಯಮ ಮುಖ್ಯಸ್ಥರೋರ್ವನಿಗೆ ಅಗತ್ಯವಾಗಿದ್ದ ಎಲ್ಲಾ ಅಗತ್ಯ ಗುಣಗಳನ್ನೂ ಹೊಂದಿದ್ದ ಗಣಪತಿ ನಿಷ್ಪಾಕ್ಷಪಾತ ಧೋರಣೆ ಹೊಂದುವ ಮೂಲಕ ಜನಾನುರಾಗಿ ಪತ್ರಿಕೋದ್ಯಮಿಯಾಗಿ ಗುರುತಿಸ್ಪಟ್ಟಿದ್ದರು ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ರಾಜ್ಯದಲ್ಲಿಯೇ ಇಂಗ್ಲೀಷ್ ಭಾಷೆಯಲ್ಲಿ ನಾಲ್ಕೂವರೆ ದಶಕಗಳ ಕಾಲ ಗಣಪತಿಯವರ ಹಾಗೇ ಅಂಕಣ ಬರಹಗಳನ್ನು ಬರೆದ ಮತ್ತೋರ್ವ ಪತ್ರಕರ್ತನಿಲ್ಲ. ಅರಮನೆ ನಗರವಾದ ಮೈಸೂರಿನಲ್ಲಿ ಪತ್ರಿಕೋದ್ಯಮಿಯಾಗಿದ್ದರೂ ಕೊಡಗು, ಕೊಡವ ಸಂಸ್ಕೃತಿ ಬಗ್ಗೆ ಸಾಕಷ್ಟು ಪ್ರಚಾರ ನೀಡುವ ಮೂಲಕ ಮೈಸೂರು - ಕೊಡಗಿನ ಬೆಸುಗೆಯಂತೆ ಗಣಪತಿ ಕಂಗೊಳಿಸಿದ್ದರು ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಬೈ.ಶ್ರೀ. ಪ್ರಕಾಶ್, ಬಿ.ಜಿ. ಅನಂತಶಯನ, ಜಿ. ಚಿದ್ವಿಲಾಸ್ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಸಾದ್ ಸಂಪಿಗೆಕಟ್ಟೆ ಮಾತನಾಡಿದರು.

ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕೊಡಗು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ.ಜೆ. ಸತೀಶ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಅಂಬೆಕಲ್ ಜೀವನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ರೋಟರಿ ವುಡ್ಸ್ ನಿರ್ದೇಶಕ ವಸಂತ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net