ರೇವಣಸಿದ್ಧನ ಹುಂಡಿಯಲ್ಲಿ ೩೬.೭೫ ಲಕ್ಷ ರೂ.

29kalagi01
ಕಾಳಗಿ ತಾಲೂಕಿನ ರೇವಗ್ಗಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು.
Published on

ಕಾಳಗಿ: ಅಸಂಖ್ಯಾತ ಭಕ್ತರ ಆರಾಧ್ಯ ದೈವ ರೇವಗ್ಗಿಯ (ರಟಕಲ್) ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ೩೬.೭೫ ಲಕ್ಷ ರೂ.ಸಂಗ್ರಹವಾಗಿದೆ.

ರೇಣಸಿದ್ಧೇಶ್ವರ ಸನ್ನಿಧಿಗೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ಪ್ರತಿ ಸೋಮವಾರ ಹಾಗೂ ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಶ್ರಾವಣದ ನಡುವಿನ ಸೋಮವಾರ ಅದ್ದೂರಿಯಾಗಿ ಜಾತ್ರೋತ್ಸವ ನಡೆಯುತ್ತದೆ. ಹೀಗಾಗಿ ಹುಂಡಿ ಭರ್ತಿಯಾಗಿದ್ದು, ಸೇಡಂನ ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ ನೇತೃತ್ವದಲ್ಲಿ ಸಿಡಿಪಿಒ, ತಹಸಿಲ್ ಕಚೇರಿ ಹಾಗೂ ಸೇಡಂ ಎಸಿ ಕಚೇರಿ ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದರು.

೩೬,೭೫,೯೧೪ ರೂ. ನಗದು ಹಣ, ೫೦ ಗ್ರಾಂ ಬಂಗಾರ, ೧.೯೧ ಕೆಜಿ ಬೆಳ್ಳಿ ಸಂಗ್ರಹವಾಗಿವೆ. ನಗದನ್ನು ರೇವಗ್ಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನ ಖಾತೆಗೆ ಜಮೆ ಮಾಡಲಾಗಿದೆ. ಬಂಗಾರ, ಬೆಳ್ಳಿಯನ್ನು ದೇವಸ್ಥಾನ ಖಜಾನೆ(ಟ್ರೆಜರಿ)ಯಲ್ಲಿ ಇಡಲಾಗಿದೆ.

ತಹಸೀಲ್ದಾರ್ ಘಮಾವತಿ ರಾಠೋಡ್, ಉಪ ತಹಸೀಲ್ದಾರ್‌ಗಳಾದ ಮಾಣಿಕ್ ಘತ್ತರಗಿ, ರವಿಕುಮಾರ್, ಅಧಿಕಾರಿಗಳಾದ ಕರಬಸಪ್ಪ, ಮಂಜುನಾಥ ಮಹಾರುದ್ರ, ಸದಾಶಿವ ವಗ್ಗೆ, ಪ್ರಮುಖರಾದ ಶಿವರಾಜ ಪಾಟೀಲ್ ಗೊಣಗಿ, ಶಿವಶರಣಪ್ಪ ಚನ್ನೂರ, ಕಂದಾಯ, ಬ್ಯಾಂಕ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

೫೩ ಸಿಬ್ಬಂದಿ ಬಳಕೆ: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ದೇಗುಲಗಳಲ್ಲಿ ರೇವಗ್ಗಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನವೂ ಒಂದಾಗಿದ್ದು, ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಭಕ್ತರು ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ ೧ ಹುಂಡಿಯಿದ್ದು, ವರ್ಷದಲ್ಲಿ ಎರಡು ಬಾರಿ ಮಾತ್ರ ಎಣಿಕೆ ಕಾರ್ಯ ನಡೆಸಲಾಗುತ್ತದೆ. ಶುಕ್ರವಾರ ನಡೆದ ಹುಂಡಿ ಎಣಿಕೆ ಕಾರ್ಯಕ್ಕೆ ೫೩ ಸಿಬ್ಬಂದಿಗೆ ಬಳಸಿಕೊಳ್ಳಲಾಗಿದೆ. ಸಿಡಿಪಿಒ ಇಲಾಖೆಯ ೨೦, ತಹಸಿಲ್ ಕಚೇರಿಯ ೩೦, ಸೇಡಂ ಎಸಿ ಆಫೀಸ್‌ನ ೩ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎಂದು ಎಸಿ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ ಮಾಹಿತಿ ನೀಡಿದರು.

ರೇವಗ್ಗಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಬಾರಿ ಹುಂಡಿ ಎಣಿಕೆ ಮಾಡಲಾಗುವುದು. ಈ ಹಿಂದೆ ೨೦೨೩ರ ಮಾ.೨೮ರಂದು ಎಣಿಕೆ ಕಾರ್ಯ ಮಾಡಲಾಗಿದ್ದು, ೫೨ ಲಕ್ಷ ರೂ. ಸಂಗ್ರಹವಾಗಿದ್ದವು. ಕೇಂದ್ರ ಸರ್ಕಾರ ೨೦೦೦ ಸಾವಿರ ರೂ. ಮುಖಬೆಲೆಯ ನೋಟ್‌ಗಳನ್ನು ಬ್ಯಾನ್ ಮಾಡಿದ್ದು, ಹೀಗಾಗಿ ಬೇಗ ಹುಂಡಿ ಎಣಿಸಲಾಗಿದೆ. ೨೦೦೦ ರೂ.ಗಳ ಮೂರು ನೋಟ್ ಬಂದಿವೆ.
| ನಾಗನಾಥ ತರಗೆ, ಎಸಿ ಕಚೇರಿ ತಹಸೀಲ್ದಾರ್, ಸೇಡಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net