

ಹನಗೋಡು: ನಾಗರಹೊಳೆ ಉದ್ಯಾನದ ಹುಣಸೂರು ವನ್ಯಜೀವಿ ವಲಯದಲ್ಲಿ ಎರಡು ದಿನಗಳ ಹಿಂದೆ ಕಡವೆ ಬೇಟೆಯಾಡಿದ್ದ ಆರೋಪಿಗಳು ಮತ್ತೆ ಬೇಟೆಯಾಡಲು ಬಂದು ಶನಿವಾರ ಅರಣ್ಯ ಸಿಬ್ಬಂದಿಗೆ ಕಾರು, ಬಂದೂಕು ಹಾಗೂ ಪರಿಕರಗಳೊಂದಿಗೆ ಸಿಕ್ಕಿ ಬಿದ್ದಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಕುಟ್ಟಂದಿ ಸಿ.ಬಿ.ಮೋಟಯ್ಯ, ಬಿ.ಎನ್.ನಾಚಪ್ಪ, ಕೆ.ಎಂ.ಸತೀಶ್, ಕೆ.ಎಸ್.ಚಂದನ್, ಕೊಂಗನ್ನ ಪಿ.ಎಂ.ಸಂದೀಪ್ ಬಂಧಿತರು. ಕಾಡಿನಲ್ಲಿ ಬೇಟೆಯಾಡಲು ಬಳಸಿದ್ದ ಕಾರು, ಎರಡು ಬಂದೂಕು, 11 ಜೀವಂತ ಕಾಡತೂಸು, ಟಾರ್ಚ್, ಮೊಬೈಲ್‌ಗಳು, ಚೂರಿ, ಕತ್ತಿ, ಪ್ಲಾಸ್ಟಿಕ್ ಚೀಲ, ಟಾರ್ಪಲ್ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಮಧ್ಯರಾತ್ರಿ 3.30ರ ವೇಳೆಯಲ್ಲಿ ಹುಣಸೂರು ವನ್ಯಜೀವಿ ವಲಯದ ಕಚುವಿನಹಳ್ಳಿ ಶಾಖೆಯ ಡಿಆರ್‌ಎಫ್‌ಒ ಎಚ್.ಎಂ.ಪ್ರಮೋದ್, ಎಸ್‌ಟಿಪಿಎಫ್‌ನ ಡಿಆರ್‌ಎಫ್‌ಒ ಚಂದನ್, ಗಸ್ತು ಅರಣ್ಯ ಪಾಲಕರು, ಎಪಿಸಿ ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ತಂಡವನ್ನು ಬೆನ್ನಟ್ಟಿ ಆನೆ ಚೌಕೂರು ಗೇಟ್ ಬಳಿಯ ಜಡೆ ಆಲದಮರ ಗೇಟ್ ಸಮೀಪ ಅಡ್ಡಗಟ್ಟಿ ಪರಿಶೀಲಿಸಿದಾಗ ಎರಡು ಒಂಟಿ ನಳಿಕೆ ಬಂದೂಕುಗಳೊಂದಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನಾಗರಹೊಳೆ ಉದ್ಯಾನದಲ್ಲಿ ಎರಡು ದಿನಗಳ ಹಿಂದಷ್ಟೇ ಕಡವೆಯೊಂದನ್ನು ಬೇಟೆಯಾಡಿ ಕೊಂದು ಅದರ ತಲೆಬಿಟ್ಟು ಉಳಿದ ಮಾಂಸವನ್ನು ಹಂಚಿಕೊಂಡು ಪರಾರಿಯಾಗಿದ್ದರ ಕುರಿತು ತಪ್ಪೊಪ್ಪಿಕೊಂಡಿದ್ದಾರೆ.
ಎಸಿಎಫ್ ಎನ್.ಲಕ್ಷ್ಮೀಕಾಂತ್, ಆರ್‌ಎಫ್‌ಒ ಕೆ.ಇ.ಸುಬ್ರಮಣ್ಯ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.