ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆಗೆ ಅಡ್ಡಿ

Cuk crime 01
ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿವಿ ಕ್ಯಾಂಪಸ್‌ನಲ್ಲಿ ಸರಸ್ವತಿ ಪೂಜೆ ಮಾಡಿರುವುದು.
Published on

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಸರಸ್ವತಿ ಪೂಜೆಗೆ ಅಡ್ಡಿಪಡಿಸಿದ ಪ್ರಸಂಗ ಬುಧವಾರ ನಡೆದಿದೆ.

ಗ್ರಂಥಾಲಯ ಹಾಗೂ ಎಜುಕೇಷನ್ (ಬಿ.ಇಡಿ) ವಿಭಾಗದಲ್ಲಿ ವಸಂತ ಪಂಚಮಿ ನಿಮಿತ್ತ ಸರಸ್ವತಿ, ಗಣೇಶ ಪೂಜೆ, ಹೋಮ ಮಾಡಲಾಗುತ್ತಿತ್ತು. ವಿಭಾಗಕ್ಕೆ ಆಗಮಿಸಿದ ಭಿನ್ನ ವಿಚಾರಧಾರೆ ಸಂಘಟನೆ ಸದಸ್ಯರು ಪೂಜೆ, ಹೋಮ ಮಾಡುವುದು ಅಧಿಕೃತವೆ ? ಇನ್ನೊಮ್ಮೆ ಪೂಜೆ ಮಾಡಿದ್ರೆ ಕೇಸ್ ಹಾಕ್ತೇವೆ ಎಂದು ಧಮಕಿ ಹಾಕಿ, ಉಪನ್ಯಾಸಕರೊಂದಿಗೆ ಜೋರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದಾರೆ. ಕೂಗಾಟ- ಚೀರಾಟ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಎಬಿವಿಪಿ ಸಂಘಟನೆಯ ಹಲವು ವಿದ್ಯಾರ್ಥಿಗಳು ಅವರನ್ನು ತಡೆಯಲು ಯತ್ನಿಸಿದ್ದಾರೆ. ಆಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ನರೋಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡು ಗುಂಪುಗಳ ವಿದ್ಯಾರ್ಥಿಗಳನ್ನು ಸಮಾಧಾನ ಪಡೆಸಿದ್ದಾರೆ. ಸದ್ಯ ಸಿಯುಕೆ ಆವರಣದಲ್ಲಿ ಶಾಂತಿ ಕಾಯ್ದುಕೊಳ್ಳಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

ಮರುಕಳಿಸುತ್ತಿರುವ ಘಟನೆಗಳು: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿವೆ. ಈ ಹಿಂದೆ ಸರಸ್ವತಿ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಪ್ರತಿಯಾಗಿ ವಿವಿ ಆಡಳಿತ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಬಣ್ಣ ಬಳಿಯುವ ವಿಚಾರ, ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಕಸದ ಬುಟ್ಟಿಗೆ ಅಂಟಿಸಿ ಅವಮಾನ ಮಾಡಲಾಗಿತ್ತು. ಜಿಲ್ಲೆಯ ಕೆಲ ಸಂಘಟನೆಯವರು ವಿವಿ ಹೊರಗಿನ ಬೀದಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ವಿಚಾರಧಾರೆ ವಿವಾದ: ವಿಶ್ವವಿದ್ಯಾಲಯದಲ್ಲಿ ನಾವು ಶಾಂತಿಯುತವಾಗಿ ಎಲ್ಲರೊಂದಿಗೆ ಕೂಡಿ ಪ್ರತಿವರ್ಷ ಹಬ್ಬ ಆಚರಿಸುತ್ತಿದ್ದೇವೆ. ಯಾರ ಭಾವನೆಗೂ ಧಕ್ಕೆ ತಂದಿಲ್ಲ. ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ ಎಂದು ಪೂಜೆ ಮಾಡುವವರು ವಾದಿಸಿದರೆ, ಶಿಕ್ಷಣ ಕೇಂದ್ರದಲ್ಲಿ ಇದೆಲ್ಲ ಬೇಕಾ? ಗಂಟೆ ಬಾರಿಸುವುದು, ಪೂಜೆ ಮಾಡುವುದು ಹೊರಗಡೆ ಇರಲಿ ಎಂಬುದು ಮತ್ತೊಬ್ಬರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net