

ಬೆಳಗಾವಿ: ಕೌಶಲ ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕಾಯಕಕಟ್ಟೆ ಸಂಘಟನೆ ಮಾಡುತ್ತಿರುವ ಕೆಲಸ ಹೆಮ್ಮೆಯ ಸಂಗತಿ. ಇದು ಕಾಯಕಕಟ್ಟೆ ಮಾದರಿಯ ಕೆಲಸವಾಗಿದೆ ಎಂದು ಗೆವಿನ್ ವ್ಯಾಕೈಂ ಸಂಸ್ಥೆಯ ಸಂಸ್ಥಾಪಕಿ ಚಿನ್ಮಯಿ ಪ್ರವೀಣ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ದೀಪಾವಳಿ ನಿಮಿತ್ತ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕಾಯಕ ಕಟ್ಟೆ ಸಂಸ್ಥಾಪಕಿ, ಪ್ರಧಾನ ನಿರ್ವಾಹಕಿ ಆಶಾ ಯಮಕನಮರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಘಟನೆ ಬಲಗೊಳ್ಳಲು ಸಮಾಜದ ಎಲ್ಲ ಬಾಂಧವರ ಸಹಾಯ, ಸಹಕಾರ ಅವಶ್ಯ ಎಂದರು.
ಮಹಾಸಭಾದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿದರು. ಸುಮಾ ಕಿತ್ತೂರ, ಶ್ವೇತಾ ನರಗುಂದ, ಅಥಣಿಯ ಪಾಂಗೆ ವೈದ್ಯ ದಂಪತಿ, ವೈ.ಎಸ್. ಮೆಣಸಿನಕಾಯಿ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು. ನಿರ್ವಾಹಕ ಮಂಡಳಿ ಸದಸ್ಯರಾದ ಶೈಲಾ ಸಂಸುದ್ದಿ ಸ್ವಾಗತಿಸಿದರು. ಸುಧಾ ಪಾಟೀಲ ಪರಿಚಯಿಸಿದರು. ಸ್ನೇಹಾ ದೊಡ್ಡಣ್ಣವರ ನಿರೂಪಿಸಿದರು. ಮಹಾದೇವಿ ಮುಂಡಗನಾಳ ಪ್ರಾರ್ಥಿಸಿದರು. ವಿದ್ಯಾ ಸವದಿ ವಂದಿಸಿದರು.
ಕಾಯಕ ಕಟ್ಟೆ ವಸ್ತು ಪ್ರದರ್ಶನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಸಿಹಿ ತಿಂಡಿ, ಮಕ್ಕಳ ಉಡುಪುಗಳು, ಅಲಂಕಾರಿಕ ಗಿಡಗಳು, ರಂಗೋಲಿ, ಮುತ್ತಿನ ತೋರಣಗಳು, ಉಣ್ಣೆಯ ಬಟ್ಟೆಯ ಬ್ಯಾಗ್‌ಗಳು, ವೈವಿಧ್ಯಮಯ ವಸ್ತುಗಳನ್ನು ಪ್ರದರ್ಶನ, ಮಾರಾಟಕ್ಕಿಡಲಾಗಿತ್ತು.