

ಜೊಯಿಡಾ: ರಾಷ್ಟ್ರಮಟ್ಟದ ಕಯಾಕಿಂಗ್ ಸ್ಪರ್ಧೆ ಪಥಮ ಬಾರಿಗೆ ಜೊಯಿಡಾ ತಾಲೂಕಿನ ಕಾಳಿ ನದಿಯಲ್ಲಿ ನಡೆಯುತ್ತಿದ್ದರೂ, ಆಯೋಜಕರು ಮಾತ್ರ ದಾಂಡೇಲಿಯಲ್ಲಿ ನಡೆಯುತ್ತಿದೆ ಎಂದು ಆಹ್ವಾನ ಪತ್ರಿಕೆ ಮತ್ತು ಬ್ಯಾನರ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಇದು ಜೊಯಿಡಾ ತಾಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್ಲ ಬ್ಯಾನರ್‌ನಲ್ಲಿ ಕಯಾಕಿಂಗ್ ಸ್ಪರ್ಧೆ ನಡೆಯುತ್ತಿರುವುದು ಗಣೇಶಗುಡಿ ದಾಂಡೇಲಿ ಎಂದು ಹಾಕಲಾಗಿದೆ. ಕಾಳಿ ನದಿಯಲ್ಲಿ ರಾಫ್ಟಿಂಗ್, ಬೋಟಿಂಗ್ ಸೇರಿ ಎಲ್ಲ ಜಲಸಾಹಸ ಚಟುವಟಿಕೆ ನಡೆಯುವುದು ಜೊಯಿಡಾ ತಾಲೂಕಿನ ವ್ಯಾಪ್ತಿಯಲ್ಲಿ. ಕಾಳಿ ನದಿಯ ದಾಂಡೇಲಿಯಲ್ಲಿ ಯಾವುದೇ ಜಲಸಾಹಸ ಕ್ರೀಡೆ ನಡೆಯುತ್ತಿಲ್ಲ. ಜೊಯಿಡಾ ತಾಲೂಕಿನಲ್ಲಿ ಶೇ. 90ರಷ್ಟು ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತಿದ್ದರೂ ದಾಂಡೇಲಿ ಎಂದು ಪ್ರಚಾರ ನಡೆಸಿ ಹಿಂದುಳಿದ ತಾಲೂಕಾದ ಜೊಯಿಡಾಕ್ಕೆ ಅನ್ಯಾಯ ಮಾಡಲಾಗುತ್ತಿದೆ.
ಶಾಸಕರ ಮಾತಿಗಿಲ್ಲ ಕಿಮ್ಮತ್ತು: ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಈ ಹಿಂದೆ ಜೊಯಿಡಾದಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ, ಜೊಯಿಡಾ ತಾಲೂಕಿನಲ್ಲಿರುವ ಎಲ್ಲ ರೆಸಾರ್ಟ್ ಮತ್ತು ಹೋಂ ಸ್ಟೇಗಳ ನಾಮಫಲಕದಲ್ಲಿ ತಾಲೂಕಿನ ಹೆಸರು ಬಳಸದೆ ದಾಂಡೇಲಿ ಅಂತ ಹಾಕಿದಲ್ಲಿ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿಗೆ ತಿಳಿಸಿದ್ದರು. ಆದರೆ, ಬಹಳಷ್ಟು ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ತಮ್ಮ ವೆಬ್‌ಸೈಟ್ ಮತ್ತು ಹೊಂ ಸ್ಟೇಗೆ ಹಾಕಿದ ಬೋರ್ಡ್‌ಗಳಲ್ಲಿ ದಾಂಡೇಲಿ ಎಂದು ಬರೆದುಕೊಂಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಅಭಿವೃದ್ಧಿಯಲ್ಲಿ ಜೊಯಿಡಾ ಹಿಂದುಳಿದ ತಾಲೂಕು. ಶೇ. 90 ರಷ್ಟು ಪ್ರವಾಸೋದ್ಯಮ ಚಟುವಟಿಕೆ ಜೊಯಿಡಾ ತಾಲೂಕಿನಲ್ಲಿ ನಡೆಯುತ್ತಿದ್ದರೂ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ದಾಂಡೇಲಿ ಎಂದೇ ಬಳಸುತ್ತಿವೆ. ಈ ಕುರಿತು ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಾಮಫಲಕ ಮತ್ತು ವೆಬ್‌ಸೈಟ್‌ನಲ್ಲಿ ಜೊಯಿಡಾ ಬಳಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಸಂತೋಷ ಸಾವಂತ, ನಿವೃತ್ತ ಸೈನಿಕ ಜೊಯಿಡಾ ಜೊಯಿಡಾ ತಾಲೂಕಿನಲ್ಲಿರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳ ನಾಮಫಲಕದಲ್ಲಿ ಜೊಯಿಡಾ ಬದಲು ದಾಂಡೇಲಿ ಎಂದು ಬರೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ರಾಷ್ಟ್ರ ಮಟ್ಟದ ಕಯಾಕಿಂಗ್ ಸ್ಪರ್ಧೆಯಲ್ಲೂ ಜೊಯಿಡಾ ಹೆಸರು ಬದಲಿಗೆ ದಾಂಡೇಲಿ ಎಂದು ಬರೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.ಮಂಜುನಾಥ ಮುನ್ನೊಳಿ, ತಹಸೀಲ್ದಾರ್ ಜೊಯಿಡಾ