ಕಾಯಕಯೋಗಿ ವಿರೂಪಾಕ್ಷ ಸ್ವಾಮೀಜಿ ಲಿಂಗೈಕ್ಯ

TIPPAYIKOPPA VIRUPAX SWAMIJI
Published on

ರಟ್ಟಿಹಳ್ಳಿ: ಸರ್ವಜ್ಞನ ನಾಡಿನಲ್ಲಿ ಧಾರ್ವಿುಕ ಜಾಗೃತಿ, ಆಧ್ಯಾತ್ಮಿಕ, ಶಿಕ್ಷಣ, ತ್ರಿವಿಧ ದಾಸೋಹ ಮೂಲಕ ಮಾಸೂರು ಮತ್ತು ತಿಪ್ಪಾಯಿಕೊಪ್ಪ ಗ್ರಾಮಗಳನ್ನು ಪಾವನಗೊಳಿಸಿದ್ದ ಶ್ರೀ ಮನಿಪ್ರ ವಿರೂಪಾಕ್ಷ ಸ್ವಾಮೀಜಿ (74) ಗುರುವಾರ ಬೆಳಗ್ಗೆ 8-15ಕ್ಕೆ ತಾಲೂಕಿನ ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಲಿಂಗೈಕ್ಯರಾದರು.

ಶ್ರೀ ವಿರೂಪಾಕ್ಷ ಸ್ವಾಮೀಜಿಗಳು 1951 ಮಾರ್ಚ್ 6ರಂದು ಸವಣೂರು ತಾಲೂಕಿನ ಹಿರೇಮರಳಿಯಲ್ಲಿ ಶ್ರೀ ಶಾಂತಮ್ಮ-ಸಣ್ಣಬಸಯ್ಯನವರ ಮಗನಾಗಿ ಜನಿಸಿದ್ದರು. ಚಿಕ್ಕಮರಳಿಹಳ್ಳಿಯಲ್ಲಿ ಶಿಕ್ಷಣ ಪೂರೈಸಿದ ಶ್ರೀಗಳು ಬಡತನದಿಂದಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರು. ಶಿಕಾರಿಪುರ ಬಳಿಯ ಕಾಳೇನಹಳ್ಳಿ ಕಪ್ಪನಹಳ್ಳಿಯ ಶತಾಯುಷಿ ಶ್ರೀ ರುದ್ರಮುನಿ ಸ್ವಾಮೀಜಿಗಳ ಸೇವೆ ಮಾಡಿದ ಇವರು ಮಠದ ಶ್ರೀ ರೇವಣಸಿದ್ಧ ಸ್ವಾಮೀಜಿಗಳಿಗೆ ಆತ್ಮೀಯರಾಗಿದ್ದರು. ನಂತರ 1958ರಲ್ಲಿ ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಉತ್ತರಾಧಿಕಾರಿಗಳಾದರು. 1985ರಲ್ಲಿ ಮಠಕ್ಕೆ ಶ್ರೀಗಳು ಬಂದಾಗ ಆಸ್ತಿಯಾಗಲಿ, ಮೂಲಸೌಕರ್ಯವಾಗಲಿ ಇರಲಿಲ್ಲ. ಆಗ ಮಠದ ಚುಕ್ಕಾಣಿ ಹಿಡಿದ ಶ್ರೀಗಳು ಭಕ್ತರ ದೇಣಿಗೆ ಹಾಗೂ ಅವಿರತ ಶ್ರಮದಿಂದ ಇಂದು ಮಠವನ್ನು ಸುಸಜ್ಜಿತವಾಗಿ ನಿರ್ವಿುಸಿದ್ದಾರೆ. ಶ್ರೀ ಮಠಕ್ಕೆ ಶ್ರೀ ಮಹಾಂತ ಸ್ವಾಮೀಜಿಯವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು.

ಹೈಕೋರ್ಟ್ ನಾರ್ಯಮೂರ್ತಿ ಕೃಷ್ಣ ದೀಕ್ಷಿತ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ, ಬಸವರಾಜ ಬೊಮ್ಮಾಯಿ, ಶಾಸಕ ಯು.ಬಿ. ಬಣಕಾರ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಸೇರಿ ರಾಜ್ಯದ ಅನೇಕ ಗಣ್ಯಮಾನ್ಯರು ಸ್ವಾಮೀಜಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಾರ್ಥಿವ ಶರೀರ ಮೆರವಣಿಗೆ ಇಂದು:

ಸೆ. 27ರಂದು ಬೆಳಗ್ಗೆ 8 ಗಂಟೆಗೆ ಮಾಸೂರು ಮತ್ತು ತಿಪ್ಪಾಯಿಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ಲಿಂಗೈಕ್ಯ ಶ್ರೀಗಳ ಪಾರ್ಥಿವ ಶರೀರ ಮೆರವಣಿಗೆ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ಶ್ರೀ ಮಠದಲ್ಲಿ ಕ್ರಿಯಾಸಮಾಧಿ ನೆರವೇರಲಿದೆ.

ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಪರಂಪರೆ ಮುಂದುವರಿಸುತ್ತ ಈ ಭಾಗದ ಭಕ್ತಜನರ ಶ್ರದ್ಧಾಕೇಂದ್ರವನ್ನಾಗಿಸುವಲ್ಲಿ ನಿರಂತರವಾಗಿ ಶ್ರೀ ವಿರೂಪಾಕ್ಷ ಸ್ವಾಮೀಜಿ ಶ್ರಮಿಸಿ ಕಾಯಕಯೋಗಿಗಳಾಗಿದ್ದರು. ಶ್ರೀ ಮಠಕ್ಕೆ ಭಕ್ತರೇ ಆಸ್ತಿ ಎಂದು ನಂಬಿ ಸದಾ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತ ಧಾರ್ವಿುಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಠದಲ್ಲಿ ಆಯೋಜಿಸಿ ಈ ನಾಡನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. | ಶ್ರೀ ಸದಾಶಿವ ಮಹಾಸ್ವಾಮೀಜಿ ಹುಕ್ಕೇರಿಮಠ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net