

ಮಂಡ್ಯ: ನಮ್ಮ ಪೂರ್ವಜರಿಗೆ ಆರೋಗ್ಯಪೂರ್ಣ ಬದುಕು ನಡೆಸುವ ಎಲ್ಲ ಕೌಶಲತೆ ತಿಳಿದಿತ್ತು. ಯಾವ ಆಹಾರವನ್ನು ಎಷ್ಟು ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಜ್ಞಾನವಿತ್ತು. ಆದ್ದರಿಂದ ಅವರ ಬದುಕಿನ ಪದ್ಧತಿ ಪುನರ್ ಆರಂಭಗೊಳ್ಳಬೇಕು ಎಂದು ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಿ.ಚಿ ಬೋರಲಿಂಗಯ್ಯ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ ಶಂಕರಗೌಡ ಸಭಾಂಗಣದಲ್ಲಿ ಹರ್ಷ ಸಮಾಜ ಸೇವಾ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಪುತ್ರ ಹರ್ಷ ಅವರ ದ್ವಿತೀಯ ವರ್ಷದ ಸಂಸ್ಮರಣೆ, ಸರ್ಕಾರಿ ಶಾಲೆ ದತ್ತು ಸ್ವೀಕಾರ, ’ಅವ್ವ’ಕಾಯಕಶ್ರೀ ಪ್ರಶಸ್ತಿ ಪ್ರದಾನ, ಬಡ ಮಕ್ಕಳಿಗೆ ನೋಟ್‌ಬುಕ್ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಶಾಲೆಯಲ್ಲಿ ಓದಿದ ಚರಿತ್ರೆ ಅಪೂರ್ಣವಾದದ್ದು, ಅಲ್ಲಿ ಯಜಮಾನನ ಇತಿಹಾಸ ಮಾತ್ರ ಇದೆ. ಜನಸಾಮಾನ್ಯರು, ಕಲಾವಿದರು, ರೈತರು, ಶೋಷಿತರ ಬವಣೆ ನಮೂದಾಗಿಲ್ಲ. ಈ ಚರಿತ್ರೆಗಳನ್ನೂ ಹೊಸದಾಗಿ ಕಟ್ಟಬೇಕಿದೆ. ಅನ್ನ, ಆರೋಗ್ಯ, ಆಶ್ರಯ, ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಅದನ್ನು ಸರ್ಕಾರ ಮರೆತಂತಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ. ಹತ್ತಾರು ವರ್ಷದಿಂದ ತೆಂಗಿನ ಬೆಲೆ ಇದ್ದಷ್ಟೇ ಇದೆ. ಚಿನ್ನದ ಬೆಲೆ ನಿತ್ಯ ಏರುತ್ತಿದೆ. ರೈತ ಬೆಳೆದದ್ದೆಲ್ಲ ನಗರಕ್ಕೆ ಹೋಗುತ್ತಿದೆ, ಅದೇ ನಗರದಿಂದ ರೈತನಿಗೆ ಏನೂ ಬರುತ್ತಿಲ್ಲ ಎಂದು ವಿಷಾದಿಸಿದರು.
ಫೆವಾರ್ಡ್-ಕೆ ಅಧ್ಯಕ್ಷ ಮಹೇಶ್ ಚಂದ್ರಗುರು ಮಾತನಾಡಿ, ರಾಜ್ಯದ ಇಪ್ಪತ್ತೊಂದು ಸಾವಿರ ಸರ್ಕಾರಿ ಶಾಲೆಗಳು ದುರಸ್ತಿಯಾಗಬೇಕಿದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿರುವ ಈ ಕಾಲಮಾನದಲ್ಲಿ ಶಾಲೆಗಳ ಸ್ಥಿತಿ ಹೀಗಾದರೆ ಹೇಗೆ?. ದೆಹಲಿ, ಕೇರಳ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಶಾಲೆಗಳು ಏನೇನೂ ಅಲ್ಲ. ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ನೀಡುವ ಮೊತ್ತ ಅತ್ಯಲ್ಪ. ಆದ್ಯತಾ ವಲಯವಾಗಿ ಶಿಕ್ಷಣ ಸರ್ಕಾರದ ದೃಷ್ಟಿಯಲ್ಲಿ ಇಲ್ಲ. ಸಮುದಾಯಕ್ಕೂ ಶಾಲೆಗಳಿಗೂ ಸಮನ್ವಯತೆ ಇಲ್ಲ. ಶಾಲೆಗಳನ್ನು ಉಳಿಸುವ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳು ಹೊರಬೇಕು ಎಂದು ಸಲಹೆ ನೀಡಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಂ.ರಾಮಚಂದ್ರ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಹರ್ಷ ಫೌಂಡೇಷನ್ ಮುಖ್ಯಸ್ಥ ಕಾರಸವಾಡಿ ಮಹದೇವು, ಡಿ.ದೇವರಾಜ್ ಕೊಪ್ಪ ಇತರರಿದ್ದರು.
ಇದೇ ವೇಳೆ ಸುಮಾರು ಐವತ್ತು ವರ್ಷ ಕಾಲ ಕಬ್ಬು ಕಟಾವು ಮಾಡುವ ಕಾಯಕ ಮಾಡುತ್ತಿರುವ ಜಯಮ್ಮ ಕಾರಸವಾಡಿ, ಚಿಕ್ಕತಾಯಮ್ಮ ಹನಿಯಂಬಾಡಿ, ಶಾಂತಮ್ಮ ಗೆಜ್ಜಲಗೆರೆ, ಜಯಮ್ಮ ಮಾಲಗಾರನಹಳ್ಳಿ, ಲಕ್ಷ್ಮಮ್ಮ ಜೀಗುಂಡಿಪಟ್ಟಣ, ಚಿಂತ್ರಮ್ಮ ಹಳುವಾಡಿ ಅವರಿಗೆ ’ಅವ್ವ’ ಕಾಯಕಶ್ರೀ ಪ್ರಶಸ್ತಿ ನೀಡಲಾಯಿತು. ಪೀಠೋಪಕರಣ ವಿತರಿಸುವ ಮೂಲಕ ಕಾರಸವಾಡಿಯ ಸರ್ಕಾರಿ ಶಾಲೆಯನ್ನು ಹರ್ಷ ಫೌಂಡೇಷನ್ ದತ್ತು ಪಡೆಯಿತು. ಆರು ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಲಾಯಿತು. ಮೂವತ್ತು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಜಾನಪದ ಕಲಾವಿದರಿಂದ ಗಾಯನ ಕಾರ್ಯಕ್ರಮ ನಡೆಯಿತು.