ಕುದುರೆಗಣಿ ದೊಡ್ಡಕೆರೆಗೆ ಕಾಯಕಲ್ಪ

4sor2
ಸೊರಬ ತಾಲೂಕಿನ ಕುದುರೆಗಣಿ ಕೆರೆ.
Published on

ಸೊರಬ: ಹೂಳು ತುಂಬಿದ ಕೆರೆಗಳಿಗೆ ಕಾಯಕಲ್ಪ ನೀಡುವ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ದಂಪತಿ ಸಂಕಲ್ಪವಾಗಿದ್ದು ಅವರ ಮಾರ್ಗದರ್ಶನದಂತೆ ಕೆರೆಗಳ ಹೂಳೆತ್ತುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಎಲ್ಲೆಡೆ ಸಾಕಾರವಾಗಿದೆ. ಅದರಂತೆ ತಾಲೂಕಿನ ತವನಂದಿ ಗ್ರಾಪಂ ಕುದುರೆಗಣಿ ಗ್ರಾಮದ ಊರ ಮುಂದಿನ ದೊಡ್ಡಕೆರೆಯ ಲೋಕರ್ಪಣೆ ಶುಕ್ರವಾರ ನೆರವೇರಲಿದೆ.
ನಮ್ಮೂರು ನಮ್ಮ ಕೆರೆ ಘೋಷಣೆಯಡಿ ಕುದುರೆಗಣಿ ಗ್ರಾಮದ 8.34 ಎಕರೆ ವಿಸ್ತೀರ್ಣವುಳ್ಳ ಕೆರೆಯನ್ನು 513ನೇ ಕೆರೆಯಾಗಿದ್ದು 6.89 ಲಕ್ಷ ರೂ. ವೆಚ್ಚದಲ್ಲಿ ಸತತ ಒಂದು ತಿಂಗಳ ಕಾಲ ಕಾಮಗಾರಿ ಕೆಲಸ ನಡೆಸಲಾಗಿದೆ. 12,500 ಟ್ರಾೃಕ್ಟರ್ ಲೋಡ್ ಮಣ್ಣನ್ನು ರೈತರು ಕೃಷಿ ಭೂಮಿಗೆ ಸಾಗಣೆ ಮಾಡಿಕೊಳ್ಳುವ ಮೂಲಕ ಕಾಮಗಾರಿ ಯಶಸ್ಸು ಕಂಡಿದೆ. ಕೆರೆಯ ಸುತ್ತ ಏರಿಯನ್ನು ನಿರ್ಮಾಣ ಮಾಡಿ, ಮಳೆಗಾಲದ ಪ್ರಾರಂಭದಲ್ಲಿ ಕೆರೆ ಏರಿಯ ಭದ್ರತೆಗಾಗಿ ಸುಮಾರು 250 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ.
ಈ ಕೆರೆ ಕಾಮಗಾರಿಯಿಂದ ಕೆರೆಯಲ್ಲಿನ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿದ್ದು ಕೆರೆಯ ಅಚ್ಚುಕಟ್ಟಿನ ಸುಮಾರು 100 ಬೋರವೆಲ್‌ಗಳಿಗೆ ಮತ್ತು 400 ಎಕರೆ ಕೃಷಿ ಭೂಮಿಗೆ ನೀರುಣಿಸಲು ಅನುಕೂಲವಾಗುತ್ತಿದೆ. ಜತೆಗೆ ಗ್ರಾಮದಲ್ಲಿನ ಜಾನುವಾರಗಳಿಗೆ ನೀರು ಕುಡಿಯಲು ಪ್ರಸ್ತುತ ವರ್ಷದ ಬರಗಾಲದಲ್ಲಿ ಈ ದೊಡ್ಡಕೆರೆ ಮಾತ್ರ ಆಸರೆಯಾಗಿದೆ.
2020-21ರಲ್ಲಿ ಕೆರೆಗಳ ಹೂಳೆತ್ತುವ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಎಂಬ ಘೋಷಣೆಯೊಂದಿಗೆ ಧರ್ಮಸ್ಥಳದ ಗ್ರಾಮಭಿವೃದ್ಧಿ ಸಂಘ ವಾರ್ಷಿಕ ನೂರು ಕೆರೆಗಳ ಪುನಶ್ಚೇತನ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ರಾಜ್ಯದ ಕೆರೆ ಹೂಳೆತ್ತುವ ಕಾಯಕವನ್ನು ಮುನ್ನಡೆಸುವ ಈ ಕಾರ್ಯ ಪ್ರಸ್ತುತ ಬರಗಾಲದಲ್ಲಿ ಜನ ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವ ತುಂಬುವ ಕೆಲಸವಾಗಿದೆ. ಕೆರೆ ಹೂಳೆತ್ತುವ ಈ ಕಾಯಕದಿಂದ ರೈತರ ಹಾಗೂ ಗ್ರಾಮದ ಆದಾಯ ಮತ್ತು ಅಭಿವೃದ್ಧಿಗೆ ನೀಡಿರುವ ಈ ಯೋಜನೆಯನ್ನು ಕುದರಗಣಿ ಗ್ರಾಮ ಸಮಿತಿಯವರು ಕೆರೆ ಸಮಿತಿಯನ್ನು ರಚಿಸಿಕೊಂಡು ಗ್ರಾಮ ಸಮಿತಿ ಮತ್ತು ಕರೆ ಸಮಿತಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜತೆಗೆ ಕೈಜೋಡಿಸಿ ಒಂದು ಸುಂದರ ಕೆರೆ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಈಗ ನೀರು ತುಂಬಿ ತಳುಕುವ ಊರ ಮುಂದಿನ ದೊಡ್ಡ ಕೆರೆಗೆ ಬಾಗಿನ ಹಾಗೂ ಕೆರೆ ಹಸ್ತಂತರ ಕಾರ್ಯಕ್ರಮನ್ನು ಜ.5ರಂದು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.
ನಮ್ಮೂರು ನಮ್ಮ ಕೆರೆ ಯೋಜನೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದವಾಗಿದೆ. ನಮ್ಮೂರ ಕೆರೆಯ ನೀರನ್ನು ಪೂರ್ವಜರ ಕಾಲದಲ್ಲಿ ಕುಡಿಯುವ ನೀರಿಗಾಗಿ ಬಳಸುತ್ತಿದ್ದರಂತೆ. ಆದರೆ ಹೂಳು ಮತ್ತು ಗಲೀಜು ಕೆರೆ ತುಂಬಿಕೊಂಡು ನೀರು ನಿಲ್ಲದಂತಾಗಿತ್ತು, ಈ ಕಾಮಗಾರಿಯಿಂದಾಗಿ ನಮ್ಮೂರ ಕೆರೆಗೆ ಮರುಜೀವ ಬಂದಂತಾಗಿದೆ ಎನ್ನುತ್ತಾರೆ ದೊಡ್ಡಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಚ್.ಹನುಮಂತಪ್ಪ.
ಧರ್ಮಸ್ಥಳ ಸಂಸ್ಥೆಯ ಪೂಜ್ಯರು ನಮ್ಮೂರ ಕೆರೆ ಹೂಳು ತೆಗೆಯಲು ಅನುದಾನ ನೀಡಿದ್ದರಿಂದ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ರೈತರು ತಮ್ಮ ಗದ್ದೆ, ತೋಟಗಳಿಗೆ ಹಾಕಿ ಕೊಂಡಿದ್ದರಿಂದ ಬರಗಾಲವಿದ್ದರೂ ಕೆರೆಯ ಮಣ್ಣು ತೇವಾಂಶ ಕಾಪಾಡಿಕೊಂಡಿದ್ದರಿಂದ ಪ್ರತಿ ವರ್ಷಕ್ಕಿಂತ ಈ ವರ್ಷ ಚನ್ನಾಗಿ ಬೆಳೆ ಬಂದಿರುತ್ತದೆ. ಈ ಕಾರ್ಯಕ್ರಮವನ್ನು ನಮ್ಮೂರಿಗೆ ನೀಡಿದ್ದಕ್ಕಾಗಿ ಪೂಜ್ಯರಿಗೆ ಗ್ರಾಮಸ್ಥರ ಪರವಾಗಿ ಭಕ್ತಿಪೂರ್ವಕ ಧನ್ಯವಾದಗಳು ಎನ್ನುತ್ತಾರೆ ಗ್ರಾಮ ಸಮಿತಿ ಅಧ್ಯಕ್ಷ ಆರ್.ಡಿ.ಅಣ್ಣಪ್ಪ.
ಕೆರೆಗಳು ಜನರ ಜೀವನಾಡಿಯಾಗಿದ್ದು ಕೆರೆಗಳ ಅಭಿವೃದ್ಧಿಯಿಂದ ಗ್ರಾಮಗಳ ಹಾಗೂ ರೈತರ ಬದುಕು ಸುಧಾರಣೆ ಆಗಲಿದೆ. ಹೂಳು ತುಂಬಿ ನೀರು ನಿಲ್ಲದೆ ಅನಾಥವಾಗಿದ್ದ ಕೆರೆಗಳಿಗೆ ಧರ್ಮಸ್ಥಳ ಸಂಸ್ಥೆಯಿಂದ ಕಾಯಕಲ್ಪ ನೀಡಲಾಗುತ್ತಿದೆ. ಸೊರಬ ತಾಲೂಕಿನಲ್ಲಿ ಧರ್ಮಸ್ಥಳ ಸಂಸ್ಥೆಯ ಮೂಲಕ 59.55 ಲಕ್ಷ ರೂ. ವೆಚ್ಚದಲ್ಲಿ 9 ಕೆರೆಗಳ ಹೂಳುತಗೆದು ಪುನಶ್ಚೇತನಗೊಳಿಸಲಾಗಿದೆ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನಾಧಿಕಾರಿ ಸುಬ್ರಾಯ ನಾಯ್ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net