

ವಿಜಯಪುರ: ನಗರದ ವಿವಿಧ ಶಾಲೆ- ಕಾಲೇಜುಗಳಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಜ್ಞಾನ ಶಿಕ್ಷಕರಿಂದ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ, ಸರ್ ಸಿ.ವಿ. ರಾಮನ್ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ವಿಶಿಷ್ಠ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ನಗರ ಹೊರ ವಲಯದ ಶ್ರೀ ವೇದ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಯರನಾಳ ವಿರಕ್ತ ಮಠದ ಗುರುಸಂಗನಬಸವ ಶ್ರೀಗಳು ಮಾತನಾಡುತ್ತಾ, ವಿಜ್ಞಾನವು ಅನೇಕ ವಿಸ್ಮಯಗಳನ್ನು ನಮಗೆ ಕೊಟ್ಟಿದೆ. ಎಲ್ಲ ಸಂಶೋಧನೆಗಳು ಮಾನವನ ಜೀವನಕ್ಕೆ ಕಾಯಕಲ್ಪವಾಗಿ ಪರಿಣಮಿಸಿವೆ. ವಿಜ್ಞಾನದ ಕೆಲವು ಸಂಶೋಧನೆಗಳು ಮಾನವನಿಗೆ ಮಾರಕವಾಗಿ ಪರಿಣಮಿಸಿವೆ. ಆದರೆ ವಿದ್ಯಾರ್ಥಿಗಳೆಲ್ಲರೂ ಜಗತ್ತಿನಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಸಂಶೋಧನೆ ಮಾಡಿರಿ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರದ ಪ್ರಸಿದ್ಧ ವೈದ್ಯ ಡಾ. ನಚಿಕೇತ ದೇಸಾಯಿ, ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಕಠಿಣ ಪರಿಶ್ರಮ ಪಡಬೇಕೆಂದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಕೆಲೂರ ಮಾತನಾಡಿ, ಸಮಸ್ಯೆಗಳನ್ನು ಗುರುತಿಸುವ ವ್ಯಕ್ತಿಗಳು ಮಾತ್ರ ವಿಜ್ಞಾನಿಗಳಾಗುತ್ತಾರೆ. ಪ್ರಚಲಿತ ಸಮಸ್ಯೆಗಳನ್ನು ತಿಳಿದು ಅದರ ಪರಿಹಾರದ ಆಲೋಚನೆಗಳನ್ನು ನರನಾಡಿಗಳಲ್ಲಿ ತುಂಬಿಕೊಳ್ಳಬೇಕು, ಅಂದಾಗ ಮಾತ್ರ ಸಂಶೋಧನೆಗಳಾಗುತ್ತವೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ ಮಾತನಾಡಿ, ವೇದ ಅಕಾಡೆಮಿಯು ಪ್ರಥಮ ವರ್ಷದಲ್ಲಿಯೇ ಒಂದು ರಾಷ್ಟ್ರೀಯ ಮಿಲಿಟರಿ ಶಾಲೆ, 27 ಕಿತ್ತೂರು ಸೈನಿಕ ಶಾಲೆಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದು ಉತ್ತಮ ಸಾಧನೆಯಾಗಿದೆ. ಪ್ರಶಸ್ತಿ ಸ್ವೀಕರಿಸಿದ ಎಲ್ಲ ವಿದ್ಯಾರ್ಥಿಗಳು ಇನ್ನೂ ಉತ್ತಮ ರೀತಿಯಲ್ಲಿ ಸಾಧಿಸಲು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕಿ ಜ್ಯೋತಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಮಾತೆ ನಫಿಸಾ ನಿರೂಪಿಸಿದರು. ಜ್ಯೋತಿ ದೇಸಾಯಿ ಸ್ವಾಗತಿಸಿದರು. ದೀಪಾ ಮಹಡಿಕರ ವಂದಿಸಿದರು. ಎನ್.ಜಿ. ಯರನಾಳ, ಮಂಜುನಾಥ ಎಂ.ಎಂ ಮತ್ತಿತರರಿದ್ದರು.
ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳಿ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಸರ್ ಸಿ.ವಿ. ರಾಮನ್‌ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳಬೇಕು. ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನ ಮಾಡಿದರು. ಪ್ರೇರಣಾ ಅಂಬಿಗೇರ, ಶ್ರೀರಕ್ಷಾ ಪಟ್ಟಣಶೆಟ್ಟಿ ಮತ್ತು ವೈಷ್ಣವಿ ಜಮಾದಾರ ವಿಜ್ಞಾನ ವಿಷಯದ ಕುರಿತು ಮಾತನಾಡಿದರು. ಸಹ ಶಿಕ್ಷಕಿ ಶಶಿಧರ ಲೋನಾರಮಠ ಮಾತನಾಡಿದರು.
ಪ್ರಾಚಾರ್ಯ ಶ್ರೀಧರ ಕುರಬೇಟ, ಪ್ರವೀಣಕುಮಾರ ಗೆಣ್ಣೂರ, ಸವಿತಾ ಪಾಟೀಲ, ಹೀನಾ ಕೌಸರ, ಈಶ್ವರ ಪೂಜಾರಿ, ಎ.ಎಚ್. ಸಗರ, ಅನಿಲಕುಮಾರ ಬಾಗೇವಾಡಿ, ಸುರೇಖಾ ಪಾಟೀಲ, ಬಸವರಾಜ ರೆಬಿನಾಳ, ಸರೋಜಾ ಕರಕಳ್ಳಿ ಮತ್ತಿತರರಿದ್ದರು. ಶ್ವೇತಾ ಪಾಟೀಲ ನಿರೂಪಿಸಿದರು. ಕವಿತಾ ನಿಂಬರಗಿ ವಂದಿಸಿದರು.
ಜಾಗತಿಕ ಸೌಖ್ಯಕ್ಕಾಗಿ ಜಾಗತಿಕ ವಿಜ್ಞಾನ: ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಜಾಗತಿಕ ಸೌಖ್ಯಕ್ಕಾಗಿ ಜಾಗತಿಕ ವಿಜ್ಞಾನ’ ಘೋಷ ವಾಕ್ಯದಡಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅನೇಕ ವಿಷಯಗಳ ಮೇಲೆ ವಸ್ತು ಪ್ರದರ್ಶನ ಮತ್ತು ಚಿತ್ರಪಟಗಳ ಪ್ರದರ್ಶನ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಉದ್ಘಾಟನೆ ನೆರವೇರಿಸಿದರು. ಡಾ. ಕೆ.ಎಸ್. ಚಡಚಣ, ಪ್ರೊ. ವಿ.ಜೆ. ಹಿರೇಮಠ ಮತ್ತು ಪ್ರೊ. ಆರ್.ಎಸ್. ಮೇತ್ರಿ ಮತ್ತಿತರರಿದ್ದರು.