ಮೈಸೂರಿನ ಇಂದಿರಾ ಕ್ಯಾಂಟೀನ್ ಮಾಳಿಗೆಗಳಿಗೆ ಕಾಯಕಲ್ಪ

news-10-indira-canteen-reopen
Published on

ಆರ್.ಕೃಷ್ಣ ಮೈಸೂರು
ಸೋರುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡಗಳ ಕಾಯಕಲ್ಪಕ್ಕೆ ಮೈಸೂರು ನಗರಪಾಲಿಕೆ ಮುಂದಾಗಿದೆ. ಕ್ಯಾಂಟೀನ್‌ಗಳು ಆರಂಭಗೊಂಡು 8 ವರ್ಷಗಳು ಕಳೆಯುತ್ತಿರುವುದರಿಂದ ಹಲವು ಕಡೆ ಶಿಥಿಲಗೊಂಡಿವೆ. ಈಗ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕ್ಯಾಂಟೀನ್ ಕಟ್ಟಡಗಳು ಸೋರಲಾಂಭಿಸಿವೆ. ಇದರಿಂದ ಜನರು, ಕೆಲಸಗಾರರು ಒಳಗೆ ಕುಳಿತು ಊಟ, ತಿಂಡಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಕೆಲವು ಕಡೆ ಪಾಚಿ ಕಟ್ಟಿಕೊಂಡಿದ್ದು, ಊಟ ಮಾಡಲು ಜನರು ಕಸಿವಿಸಿ ಅನುಭವಿಸುತ್ತಿದ್ದಾರೆ.
ದುಸ್ಥಿತಿ ತಲುಪಿರುವ ಕ್ಯಾಂಟೀನ್ ಕಟ್ಟಡಗಳ ದುರಸ್ಥಿಗಾಗಿ ಸರ್ಕಾರ ತಲಾ 5 ಲಕ್ಷ ರೂ. ಮಂಜೂರು ಮಾಡಿದೆ. ನಗರದಲ್ಲಿ ಒಟ್ಟು 12 ಇಂದಿರಾ ಕ್ಯಾಂಟೀನ್ ಕಟ್ಟಡಗಳಿದ್ದು, ಅಜೀಜ್‌ಸೇಠ್ ರಸ್ತೆಯಲ್ಲಿರುವ ಕ್ಯಾಂಟಿನ್ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಈ ಕ್ಯಾಂಟೀನ್ ಅನ್ನು ಕಟ್ಟಡ ದುರಸ್ಥಿಗೊಳ್ಳುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಉಳಿದ 11 ಕ್ಯಾಂಟೀನ್‌ಗಳಲ್ಲಿಯೂ ಸಣ್ಣಪುಟ್ಟ ದುರಸ್ಥಿ ಕಾರ್ಯ ನಡೆಯಬೇಕಿದೆ. ಕೆಲವು ಕಡೆ ಮಳೆ ನೀರು ಒಳಗೆ ಇಳಿಯುತ್ತಿದ್ದು, ದಿನದಿಂದ ದಿನಕ್ಕೆ ಕಟ್ಟಡಗಳು ದುರ್ಬಲಗೊಳ್ಳುತ್ತಿವೆ. ಈ ಕುರಿತು ವರದಿ ಪಡೆದ ಸರ್ಕಾರ, ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಗರಪಾಲಿಕೆ ಮೂಲಕ ಇಂದಿರಾ ಕ್ಯಾಂಟಿನ್‌ಗಳ ದುರಸ್ತಿಗೊಳಿಸಲು ಮುಂದಾಗಿವೆ. ಇದಕ್ಕಾಗಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮಳೆ ನಿಂತ ತಕ್ಷಣವೇ ಕಟ್ಟಡಗಳ ದುರಸ್ತಿ ಕಾರ್ಯ ಆರಂಭಗೊಳ್ಳಲಿವೆ.
ಹೊಸ ಕ್ಯಾಂಟಿನ್‌ಗೆ ಸ್ಥಳ ನಿಗದಿ:
ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈಗ ನಗರದಲ್ಲಿರುವ 12 ಕ್ಯಾಂಟೀನ್‌ಗಳ ಜತೆಗೆ ಸದ್ಯದಲ್ಲಿಯೇ ಎರಡು ಹೊಸ ಕ್ಯಾಂಟೀನ್‌ಗಳು ತಲೆ ಎತ್ತಲಿವೆ.
ಸಿದ್ದಾರ್ಥ ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣ ಹಾಗೂ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜು ಆವರಣದಲ್ಲಿ ತಲಾ ಒಂದೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗ ನಿಗದಿ ಪಡಿಸಲಾಗಿದೆ. ಮಳೆ ಬಿಡುವು ಕೊಡುತ್ತಿರುವಂತೆಯೇ ಕಟ್ಟಡಗಳು ತಲೆ ಎತ್ತಲಿವೆ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
2016ರಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ಗಳ ಪೈಕಿ ನಗರದಲ್ಲಿ 12 ಇದ್ದರೆ ಜಿಲ್ಲೆಯಲ್ಲಿ ಒಟ್ಟು 17 ಕ್ಯಾಂಟೀನ್‌ಗಳಿವೆ. ಇದೀಗ ಹೆಚ್ಚುವರಿಯಾಗಿ ನಗರದಲ್ಲಿ ಎರಡು ಸೇರಿ ಇನ್ನು 9 ಕ್ಯಾಂಟೀನ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್‌ನಿಂದ ಹಲವರಿಗೆ ಹಸಿವು ನೀಗಲು ಸಹಕಾರಿಯಾಗಿದ್ದವು. ಆದರೆ, ಬಿಜೆಪಿ ಸರ್ಕಾರದಲ್ಲಿ ಕ್ಯಾಂಟಿನ್‌ಗಳನ್ನು ಮುಚ್ಚುವ ಹುನ್ನಾರ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರು ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಿರುವುದರಿಂದ ತಮ್ಮ ನೆಚ್ಚಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ತುಂಬಲು ಮುಂದಾಗಿದ್ದಾರೆ.

ರಾಗಿ ಮುದ್ದೆ ಊಟ ಲಭ್ಯ

ಇಂದಿರಾ ಕ್ಯಾಂಟೀನ್‌ನಲ್ಲಿ ಈಗ ಮಧ್ಯಾಹ್ನ ಹಾಗೂ ರಾತ್ರಿ ರಾಗಿ ಮುದ್ದೆ ಊಟವೂ ದೊರೆಯುತ್ತಿದೆ. ಮುದ್ದೆ ಹಾಗೂ 10 ರೂ.ಗೆ ದೊರೆಯಲಿದೆ. ಅಲ್ಲದೇ 5ರೂ.ಗೆ ಬೆಳಗಿನ ಉಪಹಾರ ನೀಡಲಾಗುತ್ತಿದೆ.

ಹಲವೆಡೆ ಉತ್ತಮ ಸ್ಪಂದನೆ

ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಲವೆಡೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಲನಹಳ್ಳಿ, ಕಾಡಾ ಕಚೇರಿ, ಕೆ.ಆರ್.ಆಸ್ಪತ್ರೆ ಆವರಣ, ಶಾರದಾದೇವಿನಗರ ಸೇರಿದಂತೆ ಹಲವೆಡೆ ಜನರು ಬರುತ್ತಿದ್ದಾರೆ. ಬೆಳಗ್ಗೆ 300 ಜನರಿಗೆ ತಿಂಡಿ, ಮಧ್ಯಾಹ್ನ, ರಾತ್ರಿ ತಲಾ 200 ಜನರಿಗೆ ಊಟಕ್ಕೆ ಸರ್ಕಾರ ಹೆಚ್ಚುವರಿ ಹಣ ನೀಡುತ್ತಿದೆ. ಆದರೆ, ಇನ್ನು ಕೆಲವು ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ.

ಪ್ಲಾಸ್ಟಿಕ್ ನೀಡಿ ಊಟ, ತಿಂಡಿ ಮಾಡಿ

ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಪಾಲಿಕೆ ಮುಂದಾಗಿದ್ದು, ಇದಕ್ಕಾಗಿ ಪ್ಲಾಸ್ಟಿಕ್ ನೀಡಿ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ, ತಿಂಡಿ ಮಾಡಿ ಎನ್ನುವ ಯೋಜನೆ ಜಾರಿಗೊಳಿಸಿದೆ. ನಗರದಲ್ಲಿರುವ ಯಾವುದೇ ಕ್ಯಾಂಟೀನ್‌ನಲ್ಲಿ ಯಾರು ಬೇಕಾದರೂ ಅರ್ಧ ಕೆ.ಜಿ.ಯಷ್ಟು ಪ್ಲಾಸ್ಟಿಕ್ ನೀಡಿ ತಿಂಡಿ ಮಾಡಬಹುದು. ಒಂದು ಕೆ.ಜಿ.ಯಷ್ಟು ಪ್ಲಾಸ್ಟಿಕ್ ನೀಡಿದರೆ ಊಟ ಮಾಡಲು ಅವಕಾಶವಿದೆ. ಇದರಿಂದ ಹಣ ಇಲ್ಲದಿದ್ದರೂ ಪ್ಲಾಸ್ಟಿಕ್ ನೀಡಿ ಊಟ, ತಿಂಡಿ ಮಾಡಲು ಅವಕಾಶವಿದೆ.

ಜನರಿಗೆ ಅನುಕೂಲ
ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಊಟ, ತಿಂಡಿಗೆ ಅವಕಾಶವಿದೆ. ನಗರದಲ್ಲಿ ಇರುವ 12 ಕ್ಯಾಂಟೀನ್ ಜೊತೆಗೆ ಹೊಸದಾಗಿ ಎರಡು ಕ್ಯಾಂಟೀನ್ ನಿರ್ಮಾಣಗೊಳ್ಳುತ್ತಿದ್ದು, ದುರಸ್ತಿ ಕಾರ್ಯವೂ ನಡೆಯುತ್ತಿದೆ.
ಡಾ.ಎನ್.ಪಿ.ವೆಂಕಟೇಶ್
ಆರೋಗ್ಯಾಧಿಕಾರಿ, ಮೈಸೂರು ನಗರಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net