ಐತಿಹಾಸಿಕ ಸ್ಮಾರಕಕ್ಕೆ ಕಾಯಕಲ್ಪ

Mbd_monument
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ

ಜೈನಕಾಶಿ ಮೂಡುಬಿದಿರೆ ಪ್ರಾಚೀನ ಸ್ಮಾರಕಗಳಿಗೆ ಹೆಸರುವಾಸಿ. ಆದರೆ ಕೆಲವು ದುಷ್ಕರ್ಮಿಗಳ ಕುಕೃತ್ಯ ಹಾಗೂ ಸ್ಥಳೀಯಾಡಳಿತದ ಇಚ್ಛಾಶಕ್ತಿ ಕೊರತೆಯಿಂದ ಕೆಲವು ಸ್ಮಾರಕಗಳು ಈಗಾಗಲೇ ಇತಿಹಾಸ ಪುಟ ಸೇರಿವೆ. ಮೂಡುಬಿದಿರೆ ಚೌಟರ ಅರಮನೆ ಎದುರಿರುವ ಅರಮನೆ ಬಾಗಿಲು(ಆನೆ ಬಾಗಿಲು) ಹಲವು ವರ್ಷಗಳಿಂದ ವಿಕೃತ ಮನಸ್ಸುಗಳ ಕುಚೇಷ್ಟೆಯಿಂದ ನಲುಗಿದ್ದು, ಚೌಟ ಅರಸರ ಮನೆತನದವರು ಮಾಡಿರುವ ಸಕಾಲದ ಕಾಯಕಲ್ಪದಿಂದಾಗಿ ಮರುಜೀವ ಪಡೆದಿದೆ.

ವಿರೂಪಗೊಂಡಿದ್ದ ಸ್ಮಾರಕ:

ರಾಷ್ಟ್ರೀಯ ಸ್ಮಾರಕವಾಗಿರುವ ಮೂಡುಬಿದಿರೆ ಚೌಟರ ಅರಮನೆ ಎದುರಿರುವ ಅರಮನೆ ಬಾಗಿಲು ಪ್ರದೇಶದ ಆನೆಬಾಗಿಲು 600 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗಿದೆ. ಚೌಟ ಅರಸರ ಆಳ್ವಿಕೆ ಕಾಲದಲ್ಲಿ ಇದು ನಿರ್ಮಾಣಗೊಂಡಿರಬಹುದು ಎನ್ನಲಾಗುತ್ತಿದೆ. ಚೌಟರ ಅರಮನೆ ಹಾಗೂ ಪ್ರವೇಶದ್ವಾರದ ಪ್ರದೇಶವನ್ನು ರಾಜಾಂಗಣವೆಂದು ಕರೆಯಲಾಗುತ್ತಿದ್ದು, ಇಲ್ಲಿ ಹಿಂದೆ ಯಕ್ಷಗಾನ, ಸಾಂಸ್ಕೃತಿಕ ಕಲಾಪಗಳು ನಡೆಯುತ್ತಿತ್ತು. ಪ್ರವೇಶದ್ವಾರ ಪಕ್ಕದಲ್ಲಿ ಅಂದಿನ ಪ್ರದಾನಿ ಜವಾಹರಲಾಲ್ ನೆಹರು ಅವರು ಭಾಷಣ ಮಾಡಿರುವ ಇತಿಹಾಸವೂ ಇದೆ. ಹಿಂದೆ ಈ ದ್ವಾರ ಮೂಲಕ ಅರಮನೆಗೆ ಆನೆ, ಕುದುರೆಗಳನ್ನು ತರಲಾಗುತ್ತಿತ್ತು.

ಇಂತಹ ಐತಿಹಾಸಿಕ ಮಹತ್ವ ಸಾರುವ ಈ ದ್ವಾರವು ಹಲವು ವರ್ಷಗಳ ಹಿಂದೆ ವಿಕೃತ ಮನಸ್ಸಗಳಿಂದಾಗಿ ಗೋಡೆಯ ಮೇಲೆ ಅಶ್ಲೀಲ ಬರಹ ಮತ್ತು ಪ್ರೇಮಿಗಳ ಹೆಸರನ್ನು ಬರೆಯಾಯಲಾಗಿತ್ತು. ದ್ವಾರದ ಎಲ್ಲ ದಿಕ್ಕುಗಳಲ್ಲಿ ಅಶ್ಲೀಲ ಬರಹಗಳೇ ತುಂಬಿಹೋಗಿದ್ದವು.

*ಸ್ಮಾರಕಕ್ಕೆ ಪುನಃಶ್ಚೇತನ: ಇತ್ತೀಚೆಗೆ ಲಾರಿಯೊಂದು ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಾರದ ಕಂಬಗಳಿಗೆ ಹಾನಿಯಾಗಿತ್ತು. ಚೌಟರ ಮನೆತನದವರು ಇದರ ಪುನಃಶ್ಚೇತನಕ್ಕೆ ಮುಂದಾಗಿ, ಹಳೇ ಮಣ್ಣಿನ ಗೋಡೆಯ ಬದಲಾಗಿ, ಸಿಮೆಂಟ್‌ನಿಂದ ದ್ವಾರವನ್ನು ಗಟ್ಟಿಗೊಳಿಸಿದ್ದಾರೆ. ವಿಕೃತ ಬರಹಗಳನ್ನು ಸಂಪೂರ್ಣವಾಗಿ ಅಳಿಸಿ ಸುಣ್ಣ-ಬಣ್ಣ ಹಚ್ಚಲಾಗಿದೆ. ಈ ಮೂಲಕ ಪಾಳುಬಿದ್ದ ಸ್ಥಿತಿಯಲ್ಲಿದ್ದ ಆನೆಬಾಗಿಲು ದ್ವಾರ ಮರುಜೀವ ಪಡೆದಿದೆ.

ಬೇಕಿದೆ ಮೂಲಸೌಕರ್ಯ

ಚೌಟರ ಅರಮನೆ ಎದುರಿರುವ ಸಾರ್ವಜನಿಕ ರಸ್ತೆಯಲ್ಲಿ ಇತ್ತೀಚೆಗೆ ತ್ಯಾಜ್ಯಗಳು ತುಂಬಿಹೋಗಿದ್ದು, ಚೌಟರ ಮನೆತನದವರ ಮುತುವರ್ಜಿಯಲ್ಲಿ ಅದನ್ನು ಶುಚಿಗೊಳಿಸಲಾಗಿತ್ತು. ಆದರೆ ಎರಡು ಮೂರು ದಿನಗಳಲ್ಲಿ ಅದರ ಪಕ್ಕದಲ್ಲಿ ಮತ್ತೆ ಕಸಕಡ್ಡಿಗಳು ಕಂಡುಬಂದಿವೆ. ರಾತ್ರಿ ವೇಳೆ ಈ ಪರಿಸರದಲ್ಲಿ ವಾಹನ, ಜನ ಸಂಚಾರ ವಿರಳವಾಗಿದೆ. ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಕುಡುಕರು, ಕಸ ಬಿಸಾಡುವವರಿಂದ ಪರಿಸರ ಹಾಳಾಗುತ್ತಿದೆ. ಪುರಸಭೆ ಈ ಬಗ್ಗೆ ಗಮನಹರಿಸಿ ಗುಣಮಟ್ಟದ ಬೀದಿದೀಪ ಅಳವಡಿಸಬೇಕು. ಕಸ ಬಿಸಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಚೌಟ ಮನೆತನದವರು, ಸ್ಥಳೀಯರ ಬೇಡಿಕೆ. ಆನೆ ಬಾಗಿಲು ದ್ವಾರ ಪಕ್ಕದಲ್ಲಿ ಒಂದೇ ರಸ್ತೆ ಇದ್ದು, ಬಹಳಷ್ಟು ಇಕ್ಕಟ್ಟಾಗಿದೆ. ಇದೇ ಕಾರಣದಿಂದಾಗಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಹಾನಿಯಾಗಿತ್ತು. ದ್ವಾರದ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನಗಳು ಬರುವುದು ಕಾಣಿಸದ್ದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆನೆಬಾಗಿಲು ಎರಡು ಬದಿ ರಸ್ತೆ ನಿರ್ಮಿಸಿ, ಮಧ್ಯೆವೃತ್ತದ ಮಾದರಿಯಲ್ಲಿ ಆನೆಗೋಡೆ ಇದ್ದರೆ, ಸಂಚಾರಕ್ಕೆ ಸಹಕಾರಿ ಮಾತ್ರವಲ್ಲ ಸ್ಮಾರಕವೂ ಸುಂದರವಾಗಿ ಕಾಣಿಸುತ್ತದೆ. ಇದಕ್ಕೆ ಜಾಗದ ಅವಶ್ಯಕತೆ ಇದಲ್ಲಿ ಪಕ್ಕದಲ್ಲಿ ಜಾಗವನ್ನು ಬಿಟ್ಟು ಕೊಡುವುದಾಗಿ ಚೌಟರ ಅರಮನೆಯ ಕುಲದೀಪ ಎಂ. ತಿಳಿಸಿದ್ದಾರೆ.

ಚೌಟರ ಅರಮನೆ ಎದುರಿನಲ್ಲಿರುವ ಆನೆ ಬಾಗಿಲು ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳ. ಈ ಪರಿಸರದ ಬಗ್ಗೆ ಸ್ಥಳೀಯಾಡಳಿತವು ಹೆಚ್ಚಿನ ಗಮನಹರಿಸಬೇಕಾಗಿದೆ. ಸೂಕ್ತ ಬೆಳಕು, ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲು ಪುರಸಭೆ ಯೋಜನೆ ರೂಪಿಸಿದ್ದಲ್ಲಿ, ನಮ್ಮ ಕಡೆಯಿಂದ ಸಹಕಾರ ನೀಡಲಿದ್ದೇವೆ. ಕುಲದೀಪ ಎಂ., ಚೌಟರ ಅರಮನೆ, ಮೂಡುಬಿದಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net