ರಾಜ್ಯದ 2,541 ಆಸ್ಪತ್ರೆಗಳಿಗೆ ‘ಕಾಯಕಲ್ಪ’ ಪ್ರಶಸ್ತಿ ಪ್ರದಾನ

'Kayakalpa' awards were given to hospitals in Mysore city on Tuesday
Published on

ಮೈಸೂರು: ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ ರಾಜ್ಯದ 2,541 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 2021-22, 2023-24 ನೇ ಸಾಲಿನ ‘ಕಾಯಕಲ್ಪ’ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ನಗರದ ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಾಯಕಲ್ಪ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. 2021-22ನೇ ಸಾಲಿನಲ್ಲಿ 3316 ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಈ ಪೈಕಿ 900 ಕೇಂದ್ರಗಳಿಗೆ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ಹಾಸನದ ಚಾಮರಾಜೇಂದ್ರ ಬೋಧನಾ ಆಸ್ಪತ್ರೆ ಪ್ರಥಮ, ತಾಲೂಕು ಆಸ್ಪತ್ರೆ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಆಸ್ಪತ್ರೆ ಪ್ರಥಮ ಬಹುಮಾನ ಪಡೆದುಕೊಂಡಿತು.

2022-23ನೇ ಸಾಲಿನಲ್ಲಿ 8670 ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, 1641 ಕೇಂದ್ರಗಳಿಗೆ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ಬೆಂಗಳೂರಿನ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ ಆಸ್ಪತ್ರೆ ಪ್ರಥಮ, ತಾಲೂಕು ಆಸ್ಪತ್ರೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆರೋಗ್ಯ ಕೇಂದ್ರ ಪ್ರಥಮ ಬಹುಮಾನ ಪಡೆದುಕೊಂಡಿತು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನರ ಆರೋಗ್ಯವನ್ನು ಕಾಪಾಡುವ ಆಸ್ಪತ್ರೆಗಳು ಶುಚಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಶುಚಿತ್ವ ಕಾಪಾಡುವ ಆಸ್ಪತ್ರೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಶೆ.70 ರಷ್ಟು ಅಂಕ ಪಡೆದ ಆಸ್ಪತ್ರೆಗೆ ಪ್ರಶಸ್ತಿ ದೊರೆಯುತ್ತದೆ. ಈ ಮಾನದಂಡ ಪ್ರಕಾರ ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆಯಲ್ಲಿ ಶೇ.10 ರಷ್ಟು ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಸ್ವಚ್ಚತೆ ಪಾಲನೆಯಾಗಿದೆ. ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದ್ದರೂ ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದು ಸರಿಯಲ್ಲ. ಸ್ವಚ್ಛತೆ ಪಾಲನೆ ಮಾಡದೆ ಇರುವುದು ಆರೋಗ್ಯ ಇಲಾಖೆ ಸಿಬ್ಬಂದಿಯ ಕಾರ್ಯವೈಖರಿ ತೋರಿಸುತ್ತದೆ. ಈ ವರ್ಷದಲ್ಲಾದರೂ ಉತ್ತಮ ಸಾಧನೆ ತೋರಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.

ಹಲವಾರು ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸರ್ಕಾರದ ವ್ಯವಸ್ಥೆಯಲ್ಲಿನ ಲೋಪಗಳನ್ನೇ ನೆಪ ಮಾಡಿಕೊಂಡು ಸಾರ್ವಜನಿಕರು ಪರದಾಡುವಂತೆ ಮಾಡಬಾರದು. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ವೈದ್ಯರು ಪ್ರಯತ್ನಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net