

ಮೈಸೂರು: ನಾಡಿನಲ್ಲಿ ಕಾಯಕ ಶರಣರ ಪ್ರಭಾವ ಬಹಳಷ್ಟಿದೆ. 12ನೇ ಶತಮಾನದಲ್ಲಿಯೇ ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ ಸಮಾನತೆ ಸಾರಲು ಶ್ರಮಿಸಿದ್ದಾರೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಿರು ರಂಗಮಟದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿ, ಶರಣರು, ಕಾಯಕ, ದಾಸೋಹ ಮತ್ತು ವಚನಗಳ ಮೂಲಕ ನಾಡಿಗೆ ಸಂದೇಶ ಸಾರಿದ್ದಾರೆ. ಕಾಯಕದ ಆಧಾರದ ಮೇಲೆ ಜಾತಿ ಮಾಡಬಾರದು. ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಚಿಕ್ಕದಲ್ಲ ಎಂದರು.
ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕಾಯಕ ಸಮುದಾಯದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ ಎಂದರು.
ಇಡೀ ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಅನುಭವ ಮಂಟಪವಾಗಿದೆ. 12 ನೇ ಶತಮಾನದಲ್ಲಿಯೇ ಕಾಯಕ ಮತ್ತು ದಾಸೋಹಗಳ ಅಡಿಪಾಯದಲ್ಲಿ ಭ್ರಾತೃತ್ವ ಹಾಗೂ ಸಮಾನತೆಯ ಆಶಯದೊಂದಿಗೆ ಅನುಭವ ಮಂಟಪವನ್ನು ಬಸವಣ್ಣನವರು ನಿರ್ಮಿಸಿದ್ದರು ಎಂದು ತಿಳಿಸಿದರು.
ಹೆಣ್ಣನ್ನು ಕಡೆಗಣಿಸುತ್ತಿದ್ದ ಆ ಕಾಲದಲ್ಲಿಯೇ ಸದ್ಗತಿಗೆ ಹೆಣ್ಣೇ ಮೂಲ ಎಂದು ಶ್ರೇಷ್ಠ ಶರಣರಾದ ಬಸವಣ್ಣತಮ್ಮ ವಚನಗಳ ಮೂಲಕ ಸಾರಿದ್ದರು. ಮಾದಾರ ಚೆನ್ನಯ್ಯನ ಮನೆಯ ಅಂಬಲಿ ಕುಡಿದಿದ್ದಕ್ಕೆ ವೇದ ನಡುಗಿತ್ತು ಶಾಸ್ತ್ರ ಅಡಗಿತ್ತು. ಮಾದಾರ ಚೆನ್ನಯ್ಯನ ದಾಸಿಯ ಮಗ ನಾನು ಎಂದುಕೊಳ್ಳುವ ಬಸವಣ್ಣ ಜಾತಿ ಮೌಢ್ಯವನ್ನು ತ್ಯಜಿಸಿದ್ದರು ಎಂದರು.
ಶ್ರೀ ಬಸವಾನಂದ ಸ್ವಾಮೀಜಿ, ಉಪ ಮೇಯರ್ ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸಾಹಿತಿ ಪರಮೇಶ್ವರ ಭಟ್ಟ, ಎಪಿಎಂಸಿ ಸದಸ್ಯ ಜವರಪ್ಪ ಇತರರಿದ್ದರು.