ಕಾಯಕ ನಿಷ್ಠೆಯಿಂದ ಬದುಕು ಸಮೃದ್ಧ

24ATHANIGRAMIN1
Published on

ಅಥಣಿ ಗ್ರಾಮೀಣ: ಪ್ರತಿಯೊಬ್ಬರೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶರಣರ ಮಾತುಗಳನ್ನು ಆಲಿಸುವುದರಿಂದ ಶಾಂತಿ, ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದು ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಶಿವಶರಣೆ ಅವ್ವಲಿಂಗಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯ ದುಶ್ಚಟಗಳಿಗೆ ಅಂಟಿಕೊಂಡು ಅಮೂಲ್ಯ ಬದುಕು ಕಳೆದುಕೊಳ್ಳುತ್ತಿದ್ದಾನೆ. ಕಾಯಕ ಹಾಗೂ ಸೇವಾ ಮನೋಭಾವದಿಂದ ಸತ್ಸಂಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡ ಚಿದಾನಂದ ಸವದಿ ಮಾತನಾಡಿ, ದೈವಿಶಕ್ತಿಯ ಅನುಗ್ರಹ ಹಾಗೂ ಗುರು-ಹಿರಿಯರ ಮಾರ್ಗದರ್ಶನದಿಂದ ಬದುಕು ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಹೆತ್ತವರು ಹಾಗೂ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶಶಿಕಾಂತ ಶರಣರು ಆಶೀರ್ವಚನ ನೀಡಿದರು. ಕಲ್ಲೂರ ಆರೂಢ ವಿದ್ಯಾಶ್ರಮದ ಲಲಿತಮ್ಮ ತಾಯಿ ನೇತೃತ್ವ ವಹಿಸಿದ್ದರು.

ತಾಪಂ ಮಾಜಿ ಸದಸ್ಯ ರೀದ್ ಅವಟಿ, ಚಂದ್ರಶೇಖರ ಗಾಣಿಗೇರ, ಬಸವರಾಜ ಅಂಬಿ, ಗಂಗಾಧರ ಶರಣರು, ಶಂಕರ ಶರಣರು, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಸ ದಳವಾಯಿ, ಉಪಾಧ್ಯಕ್ಷ ತಮ್ಮಣ್ಣ ಸಾವಗಾಂವ, ಪರಗೊಂಡ ಚೌಗಲಾ, ಸಿದ್ದಗೌಡ ಪಾಟೀಲ, ಬಸಪ್ಪ ರಡ್ಡೇರಟ್ಟಿ, ನರಸಪ್ಪ ಮಗದುಮ್ಮ, ಸದಾಶಿವ ಅವಟಿ, ಉಮೇಶ ಕೋಣೆ, ಈರಪ್ಪ ಬಸಗೌಡರ, ಪ್ರಕಾಶ ತೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net