

ಸವಣೂರ: ಇವ ನಮ್ಮವ ಎನ್ನುವ ಬಸವಣ್ಣನವರ ತತ್ವವನ್ನು ಅನೂಚಾನವಾಗಿ ಪಾಲಿಸುವ ಮೂಲಕ ಬಣಿಜಿಗರು ಸಮಾಜದಲ್ಲಿ ಸಮಾನತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸವಣೂರ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ದ್ವಿತೀಯ ವರ್ಷದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಅಸಮಾನತೆಯ ಪಿಡುಗು ತೊಡೆಯಲು ಮುಂದಾದ ಬಸವಣ್ಣನವರಿಗೆ ದುಷ್ಟಶಕ್ತಿಗಳಿಂದ ಪ್ರತಿರೋಧ ವ್ಯಕ್ತವಾಗಿತ್ತು. ಅಂದು ಅಣ್ಣನವರ ಕಾಯಕ-ದಾಸೋಹದೊಂದಿಗಿನ ಸಾಮಾಜಿಕ ನ್ಯಾಯ ಅಪ್ಪಿಕೊಂಡು, ಇಂದಿಗೂ ಪ್ರಸ್ತುತವಾದ ಅವರ ಜೀವನಾದರ್ಶಗಳನ್ನು ಆಚರಿಸುತ್ತಿರುವ ಬಣಜಿಗ ಸಮಾಜದ ಹಿರಿಯರು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
2023ರಲ್ಲಿ ಪ್ರಥಮ ಬಾರಿಗೆ ಈ ಭಾಗದಲ್ಲಿ ಬಣಜಿಗ ಸಮಾಜವನ್ನು ಸಂಘಟಿಸುವ ಮೂಲಕ ಒಗ್ಗಟ್ಟಿನೊಂದಿಗೆ ಸಮಾವೇಶ ಆಯೋಜಿಸಲಾಗಿತ್ತು. ಇಂದು ದ್ವಿತೀಯ ಸಮಾವೇಶ ಅರ್ಥಪೂರ್ಣವಾಗಿ ಸಂಘಟಿಸಿರುವುದು ಹೆಮ್ಮೆಯ ಸಂಗತಿ. ಬೇರೆ ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಹಮ್ಮಿಕೊಳ್ಳಲು ಇಂತಹ ಸಮಾವೇಶಗಳು ಪ್ರೇರೇಪಣೆಯಾಗಲಿವೆ ಎಂದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲ ಸಮಾಜಗಳ ಶ್ರೇಯೋಭಿವೃದ್ಧಿಯಲ್ಲಿ ಬಣಜಿಗ ಸಮಾಜದ ಪಾತ್ರ ಬಹಳ ದೊಡ್ಡದಾಗಿದೆ. ಎಲ್ಲ ಸಮಾಜಗಳ ಅಭಿವೃದ್ಧಿ ಮಾಡಿ, ತಮ್ಮ ಸಮಾಜವೂ ಮುಂದುವರಿಯಬೇಕೆಂದು ಸಂಘಟಿತರಾಗಿ ಸಮಾವೇಶ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಉದ್ಯೋಗ-ವ್ಯಾಪಾರಕ್ಕೆ ಅತ್ಯಂತ ಮಹತ್ವ ನೀಡುವ ಬಣಿಜಿಗ ಸಮುದಾಯ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಈ ಸಮಾಜದ ಬೇಡಿಕೆಯಾದ ಸಮುದಾಯ ಭವನ ನಿರ್ಮಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈಗ ಬೊಮ್ಮಾಯಿ ಶಾಸಕ ಸ್ಥಾನದಲ್ಲಿಲ್ಲ ಎನ್ನುವ ವಿಚಾರ ಬೇಡ. ಸೇವೆ ಮಾಡುವ ಸೇವಕನಿಗೆ ಸ್ಥಾನ ಮುಖ್ಯವಲ್ಲ ಇಷ್ಟು ವರ್ಷ ನೀವು ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದೆಯೂ ಈ ಕೇತ್ರದ ಪ್ರತಿಯೊಂದು ಸಮುದಾಯದ ಸಹಾಯ-ಸಹಕಾರಕ್ಕೆ ಬಸವರಾಜ ಬೊಮ್ಮಾಯಿ ಸದಾ ಸಿದ್ಧ. ಬಣಜಿಗ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಸೇವೆಯನ್ನು ಜೀವವಿರುವವರೆಗೆ ಮಾಡುತ್ತೇನೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮೊದಲಿನಿಂದಲೂ ವ್ಯಾಪಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬಣಜಿಗ ಸಮುದಾಯ ಆರ್ಥಿಕ ಶಕ್ತಿಯಾಗಿದೆ. ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಹಾಸನ ಜಿಲ್ಲೆಯ ಅರಕಲಗೂಡು ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಬಣಜಿಗ ಸಂಘದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ನೂತನ ಸಂಸದರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾ ಅಧ್ಯಕ್ಷ ಬಸವರಾಜ ಹೆಬಸೂರ, ರಾಜಶೇಖರ ಮೆಣಸಿನಕಾಯಿ, ತಾಲೂಕು ಸಂಘದ ಉಪಾಧ್ಯಕ್ಷರಾದ ಮಂಜುನಾಥ ಶೆಟ್ಟರ, ಗುರು ಅಂಗಡಿ, ಪದಾಧಿಕಾರಿಗಳಾದ ಮಂಜುನಾಥ ಬೆಣ್ಣಿ, ಶಿವಕುಮಾರ ತೆಗ್ಗಿಹಳ್ಳಿ, ಬಸವರಾಜ ಹಾಲಗಿ, ಮಹಾಂತೇಶ ಹಾವಣಗಿ ಹಾಗೂ ಇತರರು ಇದ್ದರು.