ಕಾಯಕ-ದಾಸೋಹ ಬದುಕಿನ ಮಂತ್ರವಾಗಲಿ

10SND-01
Published on

ಸಿಂಧನೂರು: ಶರಣರು ತೋರಿದ ಸನ್ಮಾರ್ಗದಲ್ಲಿ ನಡೆದರೆ ಬದುಕು ಬಂಗಾರವಾಗಲಿದ್ದು, ಅವರ ವಚನಗಳ ಮೌಲ್ಯವನ್ನು ಅರಿಯಬೇಕೆಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಜೀವನ, ಮುಕ್ತಿ ಮಾರ್ಗಕ್ಕಾಗಿ ನಾವು ಎಲ್ಲಿಯೂ ಪರಿಹಾರ ಹುಡುಕುವುದು ಬೇಕಾಗಿಲ್ಲ. ಶರಣರ ಬದುಕನ್ನು ಆದರ್ಶವಾಗಿಟ್ಟುಕೊಂಡರೆ ಸಾಕು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕಾಯಕ, ದಾಸೋಹ ಬದುಕಿನ ಮೂಲ ಮಂತ್ರವಾಗಬೇಕು. ಆಗ ಬದುಕು ಶ್ರೇಷ್ಠವಾಗುತ್ತದೆ. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ಅನರ್ಘ್ಯ ರತ್ನವಾಗಿದ್ದು, ಅವರ ಆದರ್ಶಗಳ ಪಾಲನೆಯಾಗಬೇಕು ಎಂದರು.

ಬಸವಕೇಂದ್ರದ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಮಾತನಾಡಿ, ವಚನಗಳು ಬದುಕಿನ ಮೂಲ ಸೂತ್ರವಾಗಿವೆ. ನಾವು ಬದುಕಿನಲ್ಲಿ ಅನುಸರಿಸಬೇಕಾದ ಕಾಯಕ, ದಾಸೋಹ ಪರಿಕಲ್ಪನೆಯನ್ನು ವಚನಗಳು ನಮಗೆ ತಿಳಿಸಿಕೊಟ್ಟಿವೆ ಎಂದರು. ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ಬಸವಣ್ಣ ಹಾಗೂ ಹೇಮರಡ್ಡಿ ಮಲ್ಲಮ್ಮ ಜಗತ್ತಿಗೆ ಬದುಕಿನ ಸತ್ಯವನ್ನು ತಿಳಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದರು.

ಪ್ರಮುಖರಾದ ಚಂದ್ರಶೇಖರಗೌಡ ಬಾದರ್ಲಿ, ಸರ್ವೋತ್ತಮರಡ್ಡಿ, ಮಲ್ಲಪ್ಪ, ಬಸವರಾಜ ಸಾಹುಕಾರ ಕುರುಕುಂದಿ, ಅಮರಯ್ಯಸ್ವಾಮಿ ಅಲಬನೂರು, ಖಾಜಿ ಮಲ್ಲಿಕ್ ವಕೀಲ, ನಿರುಪಾದೆಪ್ಪ ಜೋಳದರಾಶಿ, ಚಂದ್ರಶೇಖರ ಹರಟೆನೂರು, ಶಿವರಾಜ ಪಾಟೀಲ್ ಗುಂಜಳ್ಳಿ, ಶಿವಕುಮಾರ ಜವಳಿ, ವೀರೇಶ ನಾಡಗೌಡ, ಗುಂಡಪ್ಪ ಬಳಿಗೇರ, ಶಾಂತಪ್ಪ ಚಿಂಚರಕಿ, ಬಸವಲಿಂಗಪ್ಪ ಬಾದರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net