

ಮಂಡ್ಯ: ನರೇಗಾ ಯೋಜನೆಗೆ ಸಂಬಂಧಿಸಿದಂತೆ ಕೂಲಿ ಹಾಗೂ ಕೆಲಸದ ದಿನವನ್ನು ಹೆಚ್ಚಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಆಯೋಜಿಸಿದ್ದ ಉದ್ಯೋಗ ಖಾತ್ರಿ ಕಾಯಕ ಬಂಧುಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟಗಾರರು ಉದ್ಯೋಗ ಖಾತ್ರಿ ಸೇರಿದಂತೆ ಕೂಲಿ ದರವನ್ನು ಹೆಚ್ಚು ಮಾಡಬೇಕೆನ್ನುವ ಬೇಡಿಕೆ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.
ಉದ್ಯೋಗ ಖಾತ್ರಿ ರೈತರು ಮತ್ತು ರೈತಕೂಲಿ ಕಾರ್ಮಿಕರಿಗೆ ಪರಿಣಾಮಕಾರಿಯಾಗಿ ಸಿಗುತ್ತಿರುವ ಯೋಜನೆಯಾಗಿದೆ. ದಿನಕ್ಕೆ 316 ರೂನಂತೆ 100 ದಿನ ಕೂಲಿ ನೀಡಲು ಅವಕಾಶವಿದೆ. ಜಿಲ್ಲೆಯಲ್ಲಿ ಅಂದಾಜು 2.5 ಲಕ್ಷ ಜಾಬ್ ಕಾರ್ಡ್ ಇರುವುದರಿಂದ ಎಲ್ಲರಿಗೂ 100 ದಿನ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಜಿ.ಎನ್.ನಾಗರಾಜು ಮಾತನಾಡಿ, ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಎನ್ನುವುದು ಸ್ವಾತಂತ್ರ್ಯ ಚಳವಳಿ ಆಶಯವಾಗಿದೆ. ಹಲವು ಕವಿಗಳ ಆಶಯವೂ ಇದೇ ಆಗಿದೆ. ನಮ್ಮ ದೇಶದಲ್ಲಿ ಸುಮಾರು ಶೇ.25ಕ್ಕಿಂತ ಹೆಚ್ಚು ಕೂಲಿ ಬೇಡಿಕೆ ಇದೆ. ಇವರಿಗೆಲ್ಲ ಸಮಪಾಲು ಸಿಕ್ಕಿದೆಯೇ ಎಂಬುದೇ ಪ್ರಶ್ನೆಯಾಗಿದೆ. ಆದರೆ ನಾವು ಅದನ್ನು ಪಡೆಯುತ್ತೇವೆ. ಉದ್ಯೋಗ ಖಾತ್ರಿ ಯೋಜನೆ ಸುಮಾರು 15 ವರ್ಷದ ಹಿಂದೆ ಜಾರಿಗೆ ಬರುವ ಸಂದರ್ಭದಲ್ಲಿ ಯೋಜನೆಯ ಗುರಿ ಸಮಪಾಲು ಮತ್ತು ಸಮಬಾಳು ಯೋಜನೆ ಸ್ವಲ್ಪವಾದರೂ ಸಿಗಲಿ ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಚುನಾವಣೆ ಬರುವಾಗ ದೇಶ ಬದಲಿಸುವ ಆಮಿಷಗಳು ಬರುತ್ತವೆ. ಇಂತಹ ಸಂದರ್ಭದಲ್ಲಿಯೇ ಕೂಲಿಕಾರರ ಸಮಸ್ಯೆ ಬಗೆಹರಿಯಬೇಕು. ಮುಂದಿನ ಚುನಾವಣೆ ಬರುವ ಮುನ್ನ ಬಡವರು, ರೈತರು, ಕೂಲಿಕಾರರು ಹಾಗೂ ದುಡಿಯುವ ಜನರ ಪರವಾದ ನೀತಿಯನ್ನು ಗೆಲ್ಲಿಸಲು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಅಮಾಸಯ್ಯ, ಎನ್.ಸುರೇಂದ್ರ, ಬಿ.ಎಂ.ಶಿವಮಲ್ಲಯ್ಯ, ಕಾರ್ಯದರ್ಶಿಗಳಾದ ಸರೋಜಮ್ಮ, ಸರೋಜಮ್ಮ, ಅರುಣ್‌ಕುಮಾರ್, ಮುಖಂಡರಾದ ಕೆ.ಬಸವರಾಜು, ಟಿ.ಸಿ.ವಸಂತ, ಶುಭಾವತಿ, ಬಿ.ಹನುಮೇಶ್ ಇದ್ದರು.