ಕಾಯಕ ಯೋಗಿ ಮಾಳಿ ಸಮಾಜ

Kayak Yogi Mali Society
ಜಮಖಂಡಿ ನಗರದ ಬಸವ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ಮಾಳಿ ಸಮಾಜದ ಅಧ್ಯಕ್ಷ ಡಾ. ಸಿ.ಬಿ. ಕುಲಗೋಡ ಉದ್ಘಾಟಿಸಿದರು. ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಾಡು ಮಾಳಿ, ನಾಗಪ್ಪ ಸನದಿ ಇದ್ದಾರೆ.
Published on

ಜಮಖಂಡಿ: ಮಾಳಿ ಸಮಾಜ ಬಾಂಧವರು ಕಾಯಕ ಜೀವಿಗಳು. ನಿತ್ಯ ಕಾಯಕ ಮಾಡಿ ಬದುಕು ಸಾಗಿಸಿಕೊಂಡು ಎಲ್ಲ ಸಮಾಜ ಬಾಂಧವರೊಂದಿಗೆ ಅನ್ಯೋನ್ಯತೆಯಿಂದ ಇದ್ದಾರೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಬಸವ ಭವನದಲ್ಲಿ ತಾಲೂಕು ಮಾಳಿ ಸಮಾಜ ನೌಕರರ ಸಂಘ, ಮಾಳಿ ಸಮಾಜದ ಸಮಸ್ತ ಗುರು ಹಿರಿಯರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಾಳಿ ಮಾಲಗಾರ ಸಮಾಜ ನೌಕರರ, ವೃತ್ತಿಪರರ ಸಮಾವೇಶ, 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮಾನಸಿಕ, ಶಾರೀರಿಕವಾಗಿ ಸದೃಢವಾಗಿ ಸಾಧನೆ ಮಾಡಬೇಕು. ಮಾಳಿ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸರ್ವ ಜನಾಂಗದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಮಾಳಿ ಸಮಾಜಕ್ಕೆ ಸಮುದಾಯ ಭವನದ ಅವಶ್ಯಕತೆ ಇದೆ. ಅದಕ್ಕೆ ನಿವೇಶನ ನೀಡುವೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದೇಶದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ. ಅವರ ಹೋರಾಟದ ಲದಿಂದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು. ಇಲ್ಲದಿದ್ದರೆ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕೆ ಬಹಳಷ್ಟು ಮಹತ್ವವಿದೆ ಎಂದರು.

ರಾಜ್ಯ ಮಾಳಿ ಸಮಾಜದ ಅಧ್ಯಕ್ಷ ಡಾ. ಸಿ.ಬಿ. ಕುಲಗೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, , ಸಮಾಜ ಸಂಘಟನೆಗೆ ಒಗ್ಗಟ್ಟಿನ ಕೊರತೆ ಎದ್ದು ತೋರುತ್ತಿದೆ. ಇದರಿಂದ ಮಾಳಿ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ರಾಜಕಾರಣಿಗಳು ಸಮಾಜಕ್ಕೆ ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಸಮಾಜ ಅಭಿವೃದ್ಧಿ ಹೊಂದಬೇಕಾದರೆ ನಿಗಮ ಮಂಡಳಿ ಸ್ಥಾಪನೆಯಾಗಬೇಕು ಎಂದರು.

ಭಟ್ಕಳ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸತತ ಪ್ರಯತ್ನವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ದೃಢ ಸಂಕಲ್ಪದಿಂದ ನಾವು ಮುಂದೆ ಬರಲು ಸಾಧ್ಯ ಎಂದರು.

ಬೆಂಗಳೂರಿನ ಜಿಎಸ್‌ಟಿ ಉಪವಿಭಾಗಾಧಿಕಾರಿ ಶ್ರೀಮಂತ ಚಿಂಚೋಳ್ಳಿ ಮಾತನಾಡಿ, ಸಂಘಟನೆ ಇಲ್ಲದೆ ಯಾವುದೇ ಕಾರ್ಯ ಸಾಧ್ಯವಿಲ್ಲ. ನೌಕರರು ಪರಸ್ಪರ ಸಂಪರ್ಕದಲ್ಲಿರಬೇಕು. ಸಮಾಜದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಂತೆ ಮಾರ್ಗದರ್ಶನ ಮಾಡಬೇಕು ಎಂದರು.

ನಿವೃತ್ತ ತಹಸೀಲ್ದಾರ್ ಜಿ.ಎಲ್. ಮೇತ್ರೆ, ನಿವೃತ್ತ ಪ್ರಾಚಾರ್ಯ ಡಾ. ವಿ.ಎಸ್. ಮಾಳಿ ಮಾತನಾಡಿದರು.

ಮಹಾರಾಷ್ಟ್ರದ ಮಾಜಿ ಗೃಹಸಚಿವ ಸಿದ್ದರಾಮ ಮೇತ್ರೆ ಹಾಗೂ ಪುಣೆ ಮಹಾನಗರ ಪರಿವಾಹನ ಮಹಾಮಂಡಳಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ದೀಪಾ ಎಸ್. ಮುಧೋಳ ವಿಡಿಯೋ ಕಾಲ್ ಮೂಲಕ ಮಾತನಾಡಿದರು.

ಎಸ್.ವೈ. ಕುಂದರಗಿ, ಕಾಶಿನಾಥ ಕಂಕಾಳೆ, ನಾಗಪ್ಪ ಸನದಿ, ಶಂಕರ ಕಿವಟೆ, ಕಾಶಿನಾಥ ಮಾಳಿ, ಬಸವರಾಜ ಬಾಲಕಿಲೆ, ಬಸವರಾಜ ಪಾಟೀಲ, ಶಿವಶರಣ ಅವಜಿ, ಗುರುಪಾದ ಮೆಂಡಿಗೇರಿ, ಸಿದ್ದಪ್ಪ ಮೆಂಡಿಗೇರಿ, ಬಸವರಾಜ ಮಾಳಿ, ರವಿ ಯಡವಣ್ಣವರ, ಮಹಾಂತೇಶ ಹಾಳಮಟ್ಟಿ, ಸುರೇಶ ಮಾಳಿ, ಲಕ್ಷ್ಮಣ ಮಾಳಿ ಇತರರು ಇದ್ದರು.

ಸವಿತಾ ಮೆಂಡಿಗೇರಿ ಪ್ರಾರ್ಥಿಸಿದರು. ಶಿಕ್ಷಕ ಸಿ.ಆರ್. ಬೆಳಗಲಿ ಸ್ವಾಗತಿಸಿದರು. ಅಧ್ಯಕ್ಷ ಕಾಡು ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕಲ್ಯಾಣಿ, ಎನ್.ಬಿ. ಮಾಲಗಾರ ನಿರೂಪಿಸಿದರು. ಶಿವಾನಂದ ಮುಧೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net