ಸಮಾಜಕ್ಕೆ ವಚನಕಾರರ ಕೊಡುಗೆ ಅನನ್ಯ...

Sharanara Lead
Published on

ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯ

ಕಾಯಕ ಶರಣರ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ನೂರಾರು ವಚನಕಾರರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಮ್ಮ ವಚನಗಳ ಮೂಲಕವೇ ತಿದ್ದುವ ಕಾರ್ಯ ಮಾಡಿದ್ದರು. ಸಮಾಜ ಬದಲಾವಣೆಯಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

Sharanara -1
ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಪತಹಸೀಲ್ದಾರರಾದ ನವನೀತ್​, ರಾಮಚಂದ್ರ ಭಟ್​, ಶ್ರೀನಿಧಿ, ಜಾನಪದ ಕಲಾವಿದ ವಾಸು ಬನ್ನಂಜೆ ಹಾಗೂ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು.

ಸಮಾನತೆಯ ಪ್ರತಿಪಾದನೆ

ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ವಿಶೇಷ ಉಪನ್ಯಾಸ ನೀಡಿ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗಪೆದ್ದಿ ಮೊದಲಾದ ಕಾಯಕ ಶರಣರು ಜಾತಿ ಸಂಕೋಲೆಯಿಂದ ಹೊರಬಂದು ಸಮಾನತೆಯ ತತ್ತ್ವ ಪ್ರತಿಪಾದಿಸಿದರು. ಕಾಯಕ ಶರಣರು ಕಾಯಕ ಪ್ರೀತಿಸಿ, ಗೌರವಿಸಿದರೆ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ನಂಬಿದ್ದರು. 12ನೇ ಶತಮಾನದಲ್ಲಿ ನಡೆದ ಶರಣರ ಚಳವಳಿ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಪ್ರಭಾವ ಬೀರಿತ್ತು ಎಂದರು.

ಸಮಾನತೆ, ಭ್ರಾತೃತ್ವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವುದರ ಜತೆಗೆ ಶರಣರು ತಾವು ಮಾಡುವ ಕಾಯಕದಲ್ಲಿ ದೇವರನ್ನು ಕಂಡುಕೊಳ್ಳುತ್ತಿದ್ದರು. ಒಳಗೊಂದು, ಹೊರಗೊಂದು ಭಾವನೆ ಹೊಂದಿರುವ ಪ್ರಸಕ್ತ ಸಮಾಜದಲ್ಲಿ ನಾವುಗಳಿದ್ದೇವೆ. ಆದರೆ, ಏಳೆಂಟು ಶತಮಾನದ ಹಿಂದೆಯೇ ತಮ್ಮ ನೇರ ನಡೆ-ನುಡಿಯ ಮೂಲಕ ಶರಣರು ಜನಪ್ರಿಯತೆ ಗಳಿಸಿದ್ದರು. | ಡಾ. ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net