

ಶಿವಮೊಗ್ಗ: ಕಾಯಕ ಇಂದು ಎಲ್ಲರಿಗೂ ಅನಿವಾರ್ಯ. ಕೆಲಸ ಕೊಡಿಸುವ ನಿಟ್ಟಿನಲ್ಲಿ ಸೇತುವೆಯಾಗಿ ಕಾಯಕ ಪೋರ್ಟಲ್ ಆರಂಭಿಸಿರುವುದು ಅನೇಕ ಯುವ ಸಮುದಾಯಕ್ಕೆ ವರದಾನವಾಗಲಿದೆ ಎಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಹೇಳಿದರು.
ವಿನೋಬನಗರದ ಪಾಲಿಕೆ ಕಟ್ಟಡದಲ್ಲಿ ಭಾನುವಾರ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಅವರ ನೂತನ ಕಚೇರಿ ಕಾಯಕ ಸೇತು ಹಾಗೂ ಜಾಬ್ ಪೋರ್ಟಲ್ ಉದ್ಘಾಟಿಸಿ ಮಾತನಾಡಿ, ಕಾಯಕವೇ ಕೈಲಾಸ ಎಂದು 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ್ದು, ಕಾಯಕ ಪರಿಕಲ್ಪನೆ ನೀಡಿದ್ದರು. ಅಂದೇ ಕಾಯಕಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಹಳೆ ಬೇರು ಹೊಸ ಚಿಗುರು ಎಂಬಂತೆ ಇಂದು ಕಾಯಕ್ಕೆ ಹೊಸ ಹೊಸ ಚಿಂತನೆಗಳಿವೆ. ಹಳೆಯ ತತ್ವಕ್ಕೆ ಹೊಸ ಚಿಂತನೆ ಅಳವಡಿಸಿದಾಗ ಪರಿಣಾಮಕಾರಿಯಾಗಲಿದೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ. ಅದರಂತೆ ಪ್ರತಿಯೊಬ್ಬರೂ ಉದ್ಯೋಗ ಮಾಡುವುದರ ಜತೆಗೆ ಉದ್ಯಮ ಆರಂಭಿಸಬೇಕಿದೆ. ನೂತನ ಕಚೇರಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ. ಉದ್ಯೋಗದಾತರು ಹಾಗೂ ಉದ್ಯೋಗಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲಿ 4,430 ಪದವಿ ಕಾಲೇಜು ಹಾಗೂ 26 ವಿಶ್ವವಿದ್ಯಾಲಯ ಇದ್ದು, ಪ್ರತಿ ವರ್ಷ 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸುತ್ತಾರೆ. ಬಹುತೇಕರು ಉದ್ಯೋಗ ಸಿಗದೆ ಪರಿತಪಿಸುತ್ತಾರೆ. ಇನ್ನೂ ಕೆಲವೆಡೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಪದವೀಧರರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು. ಅವರಿಗೆ ವೇದಿಕೆ ಕಲ್ಪಿಸಬೇಕು ಎಂಬುದು ಕಾಯಕ ಸೇತು ಜಾಬ್ ಪೋರ್ಟಲ್ ಆರಂಭಿಸಲಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಸರ್ಜಿ ಆಸ್ಪತ್ರೆಗಳ ಸಮೂಹದ ಸಂಸ್ಥಾಪಕ ಸರ್ಜಿ ರುದ್ರಪ್ಪ, ನಮಿತಾ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಎಸ್.ದತ್ತಾತ್ರಿ, ಎ.ಜೆ.ರಾಮಚಂದ್ರ, ಯೋಗಗುರು ರುದ್ರಾರಾದ್ಯ ಹಾಜರಿದ್ದರು.
ಕಾರ್ಯನಿರ್ವಹಣೆ ಹೇಗೆ?
ಶಿವಮೊಗ್ಗದ ಎಲ್ಲ ಪ್ರತಿಷ್ಠಿತ ಸಂಸ್ಥೆಗಳ ಎಚ್‌ಆರ್‌ಗಳು ಈ ಜಾಬ್ ಪೋರ್ಟಲ್‌ನಲ್ಲಿ ಉದ್ಯೋಗದ ಮಾಹಿತಿ ಹಂಚಿಕೊಳ್ಳುತ್ತಾರೆ. ಪದವೀಧರರು ತಮ್ಮ ರೆಸ್ಯೂಮ್ ಅಥವಾ ಸಿವಿಯನ್ನು (ವೈಯಕ್ತಿಕ ವಿವರ) ಹಿಡಿದು ಸಂಸ್ಥೆಗಳಿಗೆ ತಿರುಗಾಡುವ ಬದಲು ಈ ಜಾಬ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪೋರ್ಟಲ್ನಲ್ಲಿ ಎಲ್ಲ ಎಚ್‌ಆರ್‌ಗಳಿಗೆ ಮಾಹಿತಿ ರವಾನೆಯಾಗುತ್ತದೆ.