ಕಾಯಕಕ್ಕೆ ದೇವರಿಗಿಂತ ಉನ್ನತ ಸ್ಥಾನ

Kayak has a higher status than God.
Kayak has a higher status than God.
Published on

ಜಮಖಂಡಿ: ಸತ್ಯಶುದ್ಧವಾದ ಕಾಯಕ ಮಾಡಬೇಕು. ದುಡಿದು ಬದುಕಬೇಕು. ದಾಸೋಹ ಮಾಡಬೇಕು. ಬಸವಾದಿ ಶಿವಶರಣರು ಕಾಯಕಕ್ಕೆ ದೇವರಿಗಿಂತ ಉನ್ನತ ಸ್ಥಾನವನ್ನು ಕೊಟ್ಟಿದ್ದಾರೆ ಎಂದು ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನಾ ಪಾದಯಾತ್ರೆ ಅಂಗವಾಗಿ 4ನೇ ದಿನವಾದ ಶುಕ್ರವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕೃತ್ಯ ಕಾಯಕ ಇಲ್ಲದವರು ಭಕ್ತರಲ್ಲ. ಸತ್ಯಶುದ್ಧ ಕಾಯಕ ಮಾಡುವವರಿಗೆ ಬಡತನ ಬರುವುದಿಲ್ಲ. ಜೀವನದಲ್ಲಿ ಬರೀ ಗಳಿಕೆ ಬಹಳ ಮುಖ್ಯವಲ್ಲ. ಬದಲಾಗಿ ಬಳಕೆ ಮುಖ್ಯ. ದಾಸೋಹ ತತ್ತ್ವವನ್ನು ಅಳವಡಿಸಿಕೊಂಡರೆ ಅಸಮಾಧಾನ, ಸಂಘರ್ಷ ಇರುವುದಿಲ್ಲ ಎಂದರು.

ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿ ಹೇಳುತ್ತ ಮಾತನಾಡಿ, ಮನೆಗಳೆಲ್ಲವೂ ಸ್ವರ್ಗವಾಗಬೇಕಾದರೆ ಸೊಸೆಯಂದಿರು ಮನೆಗಳ ನಂದಾದೀಪವಾಗಬೇಕು. ಅಂದಾಗ ಮಾತ್ರ ಮನೆಗಳು ಶಾಂತಿಯ ಕೇಂದ್ರವಾಗುತ್ತವೆ ಎಂದರು.

ಬಿಇಒ ಎ.ಕೆ. ಬಸಣ್ಣವರ ಮುಖ್ಯ ಅತಿಥಿಯಾಗಿ ಮಾತನಾಡಿ, ಜೀವನದ ಒತ್ತಡ ಹಾಗೂ ದ್ವಂದ್ವಗಳಿಗೆ ಅಧ್ಯಾತ್ಮ ದಿವೌಷ್ಯಧವಾಗಿದೆ ಎಂದರು.

ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿ, ಓಲೇಮಠದ ಗತವೈಭವ ಮರುಕಳಿಸಲಿದೆ ಎಂದರು.

ಹಿರಿಯ ವಕೀಲ ಎನ್.ಎಸ್. ದೇವರವರ ಮಾತನಾಡಿ, ಓಲೇಮಠದ ನಿಯೋಜಿತ ಪೀಠಾಧಿಪತಿ ಆನಂದ ದೇವರು ಶ್ರೀಗಳು ಸದ್ಭಕ್ತರನ್ನು ಆಕರ್ಷಿಸುತ್ತಿದ್ದಾರೆ. ಶ್ರೀಮಠದ ಶ್ರೇಯಸ್ಸು ಉತ್ತುಂಗಕ್ಕೆ ಒಯ್ಯುವ ಲಕ್ಷಣಗಳು ಕಾಣುತ್ತಿವೆ ಎಂದರು.

ಕಡಪಟ್ಟಿಯ ಜಗದೀಶ್ವರ ಮಠದ ಮಾತೋಶ್ರೀ ಪ್ರಮೀಳಾತಾಯಿ ಆಶೀರ್ವಚನ ನೀಡಿದರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಶ್ರೀಗಳು, ಕಲ್ಯಾಣಮಠದ ಗೌರಿಶಂಕರ ಶ್ರೀಗಳು, ಹೂವಿನ ಹಿಪ್ಪರಗಿಯ ವಿಶ್ವನಾಥ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಹಿರಿಯ ಪತ್ರಕರ್ತ ಎಂ.ಸಿ. ಗೊಂದಿ, ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ನಂದಿನಿ ಬಾಂಗಿ, ಗೀತಾ ಹಿರೇಮಠ, ನಗರಸಭೆ ಸದಸ್ಯೆ ಮಲ್ಲವ್ವ ಪಾಯಗೊಂಡ ಇದ್ದರು. ಹನಮಂತ ಬಟಕುರ್ಕಿ ವಿರಚಿತ ‘ಅನುಭವ ಅಮೃತವಾಣಿ’ ವಚನಗಳ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಸರಸ್ವತಿ ಸಬರದ(ಹೆಗಡೆ) ಪ್ರಾರ್ಥನೆ ಗೀತೆ ಹಾಡಿದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಆರ್.ಪಿ. ನ್ಯಾಮಗೌಡ ನಿರೂಪಿಸಿದರು. ಓಲೇಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು. ಹಡಪದ ಅಪ್ಪಣ್ಣ ಸಮಾಜ ಹಾಗೂ ಬಜಂತ್ರಿ ಸಮಾಜ ಜಂಟಿಯಾಗಿ ಮಹಾಪ್ರಸಾದದ ದಾಸೋಹ ಸೇವೆ ಸಲ್ಲಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net