

ಮಂಡ್ಯ: ಸಮಾಜದ ಸಂಕಷ್ಟಗಳಿಗೆ ಹಾಗೂ ನೊಂದವರ ನೆರವಿಗೆ ಬರುವುದು ಹಾಗೂ ಅವರಿಗೆ ಸಂತೋಷ ನೀಡುವುದು ಪುಣ್ಯದ ಕೆಲಸ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್ ಅವರ ಪುತ್ರ ದಿ.ಕೆ.ಎಂ.ಹರ್ಷ ಪ್ರಥಮ ವರ್ಷದ ಪುಣ್ಯ ಸಂಸ್ಮರಣೆಯ ಅಂಗವಾಗಿ ಹರ್ಷ ಸಮಾಜಸೇವಾ ಪೌಂಡೇಷನ್ ವತಿಯಿಂದ ನಗರದ ಕರ್ನಾಟಕ ಸಂಘದ ಕೆ.ವಿ ಶಂಕರಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಪ್ರಶಸ್ತಿ ಪ್ರದಾನ, ಬಡಮಕ್ಕಳಿಗೆ ನೋಟ್ ಪುಸ್ತಕ ಮತ್ತು ಪ್ರೋತ್ಸಾಹಧನ ವಿತರಣೆ, ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾನೇ ಕೆಸರಿನಲ್ಲಿ ಕುಸಿಯುತ್ತಿದ್ದರೂ ತಾವರೆ ಮರಿದುಂಬಿಗಳ ಪೊರೆವ ತೊಟ್ಟಿಲಾಗಿ ಹೇಗೆ ತಾಯ್ತನವನ್ನು ಮೆರೆಯುವುದೋ ಹಾಗೆ ಬಾಳಿಸು ಗುರುವೇ ಪ್ರೀತಿಯಿಂದ ಎಂದು ಕವಿ ವೆಂಕಟೇಶಮೂರ್ತಿ ಅವರು ಹೇಳಿರುವಂತೆ ಕಾರಸವಾಡಿ ಮಹಾದೇವು ದಂಪತಿ ದುಃಖದಲ್ಲಿದ್ದರೂ ಬೇರೆಯವರ ಸಂತೋಷದಲ್ಲಿ ಭಾಗಿಯಾಗಿದ್ದಾರೆ ಎಂದರು.
ಇಂದಿನ ಸಮಾಜದಲ್ಲಿ ಮಕ್ಕಳಿಗಾಗಿ ಪರಿತಪಿಸುವವರು ಒಂದೆಡೆ ಇದ್ದರೆ, ಇಂತಹ ಮಕ್ಕಳು ಯಾಕಾದರೂ ಜನಿಸಿದರೋ ಎಂದು ಪರಿತಪಿಸುವ ಪಾಲಕರು ಇದ್ದಾರೆ. ಭವಿಷ್ಯಕ್ಕಾಗಿ ಮಕ್ಕಳು ನನ್ನನ್ನು ಕಾಪಾಡುತ್ತಾರೆ ಎಂದು ಶಿಕ್ಷಣ, ನೈತಿಕತೆ, ಗುರು-ಹಿರಿಯರ, ಅಜ್ಜ ಅಜ್ಜಿ ಚಿಕ್ಕಪ್ಪ ದೊಡ್ಡಪ್ಪನ ಸಂಬಂಧ ತಿಳಿಸಿಕೊಟ್ಟರೂ ಮನಸ್ಸು ಮಾರ್ಪಾಟಾಗಿ ತಂದೆ ತಾಯಿಯಿಂದ ದೂರ ನಿಲ್ಲುವ ಮಕ್ಕಳು ಇದ್ದಾರೆ ಎಂದ ಅವರು, ಸಂಕಷ್ಟದಲ್ಲಿರುವವರಿಗೆ ತೊಡಗಿಸಿಕೊಳ್ಳುವ ಮೂಲಕ ಕಾರಸವಾಡಿ ದಂಪತಿಗೆ ಮಗನ ಸಾವು ಭಾದಿಸಿಲ್ಲ. ಇದು ಅಭಿನಂದನೀಯ. ಹರ್ಷನ ಹೆಸರಿನಲ್ಲಿ ಒಂದು ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು ಶಾಲೆಯ ಏಳಿಗೆ ಮೂಲಕ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವತ್ತ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಜನರನ್ನು ದುಃಖದಲ್ಲಿ ಮುಳುಗಿಸಿದೆ ಎಂದು ಸಂಭ್ರಮಪಡುವ ಸಾವಿಗೆ ವಿರುದ್ಧವಾಗಿ ದುಃಖವನ್ನು ನುಂಗಿ ಸಂತೋಷ ಹಂಚುವ ಕೆಲಸ ಮಾಡುತ್ತಿರುವುದು ಅನುಕರಣೀಯ. ಕಾರಸವಾಡಿ ಮಹಾದೇವು ದಂಪತಿ ಮನೆಯಂಗಳದಲ್ಲಿ ಅರಳಿದ ಹರ್ಷ ಎಂಬ ಚಂದ್ರ, ಈಗ ಬಾನಿನಲ್ಲಿನರುವ ಚಂದ್ರನಾಗಿ ಎಲ್ಲರ ಮನೆಯಂಗಳದಲ್ಲಿ ಬೆಳಕು ನೀಡುವ ಚಂದ್ರನಾಗಿದ್ದಾನೆ ಎಂದು ಬಣ್ಣಿಸಿದರು. ಸಂಕಷ್ಟಗಳನ್ನು ಮೀರಿ ಒಳ್ಳೆಯ ಕಾರ್ಯ ಮಾಡಲಿ ಅನೇಕರ ಜೀವನವನ್ನು ಹರ್ಷ ಮಾಯವಾಗಿಸಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಶಿ.ರಾಮಚಂದ್ರಗೌಡ ಸಮಾರಂಭ ಉದ್ಘಾಟಿಸಿದರು. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಪತ್ರಕರ್ತ ಕೌಡ್ಲೆ ಚನ್ನಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಕಾರಸವಾಡಿ ಮಹದೇವ್, ದೇವರಾಜ್ ಕೊಪ್ಪ ಇತರರಿದ್ದರು.
ಇದೇ ವೇಳೆ ಪಿ.ಕೆ.ಕಾಲನಿಯ ಸತ್ಯಮ್ಮ, ಪೂವತ್ತಮ್ಮ, ಆರ್‌ಟಿಒ ಶ್ರಮಿಕನಗರ ವಾಸಿ ಜಯಮ್ಮ, ಹನಿಯಂಬಾಡಿ ಹುಚ್ಚಮ್ಮ, ಹಳುವಾಡಿ ಮಹದೇವಮ್ಮ, ಮಲ್ಲನಾಯಕನಕಟ್ಟೆ ಸಾಕಮ್ಮ, ಕಾರಸವಾಡಿ ಕಮಲಮ್ಮ, ಸುಂದರಮ್ಮ, ಮಂಗಲ ಲಕ್ಷ್ಮಮ್ಮ ಹಾಗೂ ತಗ್ಗಹಳ್ಳಿ ಶಾಂತಮ್ಮ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.