

ಭಟ್ಕಳ: ಅಮೇರಿಕದ ಡೆನ್ವರ್ ಕೊಲೊರಾಡೊ ಕನ್ವೆನ್ಷನ್ ಸೆಂಟರ್‌ನಲ್ಲಿ ಆ.18ರಿಂದ 22ರವರೆಗೆ ಆಯೋಜಿಸಿರುವ ಅಮೇರಿಕನ್ ಕೆಮಿಕಲ್ ಸೊಸೈಟಿ ಫಾಲ್ ಕಾನ್ಫರೆನ್ಸ್‌ನಲ್ಲಿ ತಾಲೂಕಿನ ಬೇಸೆ ಗ್ರಾಮದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಭಾಗವಹಿಸುತ್ತಿದ್ದಾರೆ.
ಭಟ್ಕಳ ಹಾಗೂ ಕುಂದಾಪುರ ನ್ಯಾಯಾಲಯದಲ್ಲಿ ದಲಾಯಿತನಾಗಿ ಸೇವೆ ಸಲ್ಲಿಸುತ್ತಿರುವ ಕುಪ್ಪಯ್ಯ ಗೊಂಡ ಹಾಗೂ ಲಕ್ಷ್ಮೀ ಗೊಂಡ ಇವರ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಹಾಕೊಡ್ಲು ಸರ್ಕಾರಿ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ, ಕುಂದಾಪುರದ ಭಂಡಾರಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮತ್ತು ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಎಂ.ಆರ್. ಮದ್ದಾನಿ ಅವರ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಇವರ ಎರಡು ಲೇಖನಗಳು ಪ್ರಕಟಗೊಂಡಿವೆ.
ಸಮ್ಮೇಳನದಲ್ಲಿ ರಸಾಯನಿಕ ಶಾಸ್ತ್ರಜ್ಞರು, ಇಂಜಿನಿಯರ್ಸ್, ಶಿಕ್ಷಣ ತಜ್ಞರು, ಪದವಿ ಮತ್ತು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಪ್ರಪಂಚದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನವು ತಾಂತ್ರಿಕ ಅವಧಿ, ವೃತ್ತಿ ಅಭಿವೃದ್ಧಿ ಅವಕಾಶಗಳು ಮತ್ತು ನೆಟ್ವರ್ಕಿಂಗ್ ವಿಷಯಗಳನ್ನೊಳಗೊಂಡಿದೆ.