

ಕಾವ್ಯರಂಜನೀ ಸಭಾ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿ ಪರ್ವದ ಸಂಪೂರ್ಣ ಪದ್ಯಗಳ ಗಮಕ ವಾಚನದ ವಿಡಿಯೋ ಬಿಡುಗಡೆ ಕಾರ್ಯಕ್ರಮ ಜ.12ರಂದು ನಡೆಯಲಿದೆ.
ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜನಪದ ವಿದ್ವಾಂಸರು, ನಿವೃತ್ತ ಪ್ರಾಧ್ಯಾಪಕ ಕೃಷ್ಣಮೂರ್ತಿ ಹನೂರು ಅವರು ವಿಡಿಯೋ ಬಿಡುಗಡೆ ಮಾಡಲಿದ್ದು, ಕರ್ನಾಟಕ ಕಲಾಶ್ರೀ ಕೃ. ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅರಿವು ವಿದ್ಯಾಸಂಸ್ಥೆಯ ಮಕ್ಕಳಿಂದ ಬೆರಗಲಾ ಭಾರತವು-ಕುಮಾರವ್ಯಾಸ, ಪಂಪ ಮತ್ತು ರನ್ನರ ಭಾರತಗಳಿಂದ ಆಯ್ದ ಪದ್ಯಗಳ ವಾಚನಾಭಿನಯದ ಪ್ರಸ್ತುತಿ ನಡೆಯಲಿದೆ.
ಹಿನ್ನೆಲೆ: ಸಾಮಾನ್ಯವಾಗಿ ಇಂಗ್ಲಿಷ್ ಸಾಹಿತ್ಯದ ಮೇರುಕೃತಿಗಳ ಆಡಿಯೋಗಳು ಕಲಿಕಾರ್ಥಿಗಳಿಗೆ ಸುಲಭವಾಗಿ ಯೂಟ್ಯೂಬ್ ಮೂಲಕ ದಕ್ಕುತ್ತವೆ. ಆದರೆ ಕನ್ನಡ ಸಾಹಿತ್ಯದ ಮಹಾಕಾವ್ಯಗಳ ಆಡಿಯೋ ಪುಸ್ತಕಗಳನ್ನು ಹುಡುಕಿದರೆ ಲಭ್ಯವಿಲ್ಲ. ಹಳಗನ್ನಡದ ಕಾವ್ಯಗಳಂತಿರಲಿ, ಗಮಕಿಗಳಿಂದ ಹೆಚ್ಚು ಪ್ರಚಲಿತದಲ್ಲಿರುವ ಕುಮಾರವ್ಯಾಸ ಭಾರತವೂ ಪೂರ್ಣವಾಗಿ ದೊರಕದು ಎನ್ನುವುದು ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಡಲು ಪ್ರೇರೇಪಿಸಿತು. ಹಲವು ವಾಚನ ವ್ಯಾಖ್ಯಾನಗಳಿರುವುದು ಸತ್ಯವಾದರೂ ಅವು ಎಲ್ಲ ಪದ್ಯಗಳನ್ನು ಒಳಗೊಂಡಿಲ್ಲ ಅಥವಾ ವ್ಯಾಖ್ಯಾನವೇ ಮುಖ್ಯವಾಗಿ ನೇರವಾಗಿ ಕಾವ್ಯಾಸ್ವಾದನೆಗೆ ತೊಡಕಾಗುವ ಸಂಭವವೂ ಇರುವುದನ್ನು ಕಂಡು, ಕಾವ್ಯಪ್ರೇಮಿಗಳು ಮೂಲವನ್ನು ಅರ್ಥ ಮಾಡಿಕೊಳ್ಳಲು ಆಗುವಂತೆ ವ್ಯಾಖ್ಯಾನವಿರದೆ ವಾಚಿಸಿದ ಮೂಲ ಕರ್ಣಾಟ ಭಾರತ ಕಥಾಮಂಜರಿಯ ಆಡಿಯೋ ಪುಸ್ತಕ ಹೊರತರುವ ಯೋಜನೆಯನ್ನು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಕೃ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಕೈಗೆತ್ತಿಕೊಂಡಿತು.
ಈಗ ಪದ್ಯಗಳು ತೆರೆಯ ಮೇಲೆ ಕಾಣುವಂತೆ ವಿಡಿಯೋ ಪುಸ್ತಕವೂ ಆಗಿರುವ ಇದು ಕೇವಲ ಮೊದಲ ಪರ್ವವಾದ ಆದಿಪರ್ವಕ್ಕೆ ಸೀಮಿತವಾಗಿದ್ದರೂ, ಇದು ಸಂಪೂರ್ಣ ಕುಮಾರವ್ಯಾಸ ಕಾವ್ಯದ ಹತ್ತನೇ ಒಂದು ಭಾಗದಷ್ಟಿದೆ. ಕುಮಾರವ್ಯಾಸನನ್ನು ಓದಲು ಬಯಸುವ ಯಾರಾದರೂ ಬಳಸಲು ಸುಲಭವಾಗುವಂತೆ ವಾಚಿಸುವ ಪದ್ಯಗಳು ಸ್ಕ್ರೀನ್ ಮೇಲೆ ತೋರುವಂತೆ ವಿಡಿಯೋ ತಯಾರಿಸಲಾಗಿದೆ. ವಿಡಿಯೋದಲ್ಲಿನ ಪದ್ಯಗಳ ಪದಚ್ಛೇದವು ಅನ್ವಯಕ್ಕೆ ನೆರವಾಗುವಂತಿದೆ.
ಈ ಯೋಜನೆಯ ನಿರ್ವಹಣೆಯನ್ನು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಕಾರ್ಯದರ್ಶಿ ಜನಾರ್ದನ ಸಿ.ಎಸ್., ವಿಶ್ವನಾಥ್ ಅವರು ಧ್ವನಿಮುದ್ರಣ ಮತ್ತು ಪದ್ಯಗಳನ್ನು ಟೈಪ್ ಮಾಡಿದ್ದಾರೆ. ಪೂಜಾ ಅವರು ವಿಡಿಯೋ ಎಡಿಟಿಂಗ್ ಮತ್ತು ತಾಂತ್ರಿಕ ನಿರ್ವಹಣೆ ಮಾಡಿದ್ದಾರೆ. ಸತ್ಯಲಕ್ಷ್ಮೀ ಅನಂತಪದ್ಮನಾಭ, ವಸಂತಾ ವೆಂಕಟೇಶ್, ಮಂಜುನಾಥ್, ಜ್ಯೋತಿ ಶಂಕರ್, ಕೃ. ರಾಮಚಂದ್ರ, ಧರಿತ್ರೀ ಆನಂದರಾವ್, ಅನ್ನಪೂರ್ಣಾ ನಾಗೇಂದ್ರ, ಮಂಜುನಾಥ್ ಕೊಳ್ಳೇಗಾಲ, ಅಮೃತಾ ನಿತಿನ್ ಶಾಸ್ತ್ರೀ, ಶುಭಾ ರಾಘವೇಂದ್ರ, ಡಾ. ಸನತ್ಕುಮಾರ, ಸಂಧ್ಯಾ ರಮೇಶ್, ಸುದರ್ಶನ ಅವರು ಗಮಕ ವಾಚನ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.