

ಮಂಡ್ಯ: ನಮ್ಮ ಆತ್ಮಸಾಕ್ಷಿಗೆ ನಾವು ಬದ್ಧವಾಗಿ ಅತ್ಯಂತ ಪ್ರಾಮಾಣಿಕವಾಗಿ ಬದುಕುತ್ತಾ ನಮ್ಮೊಳಗೆ ದೇವರನ್ನು ಕಂಡುಕೊಳ್ಳುವುದು ಅಂತರಂಗ ಬಹಿರಂಗ ಒಂದಾಗುತ್ತದೆ. ವಚನಕಾರರು ಕಂಡುಕೊಂಡ ಸತ್ಯವೆಂದರೆ ಅಂತರಂಗ ಬಹಿರಂಗ ಒಂದಾದ ದೇವರನ್ನು ಕಾಣುತ್ತೇವೆ ಎಂಬುದಾಗಿತ್ತು ಎಂದು ಮೈಸೂರಿನ ಚಿಂತಕಿ ಲತಾ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಕರ್ನಾಟಕ ಸಂಘದ ಮಹಿಳಾ ಘಟಕದಿಂದ ಆಯೋಜಿಸಿದ್ದ ‘ಕಾವ್ಯಾನು ಸಂಧಾನ’ ಕಾರ್ಯಕ್ರಮದಲ್ಲಿ 12ನೇ ಶತಮಾನದ ವಚನಗಾರ್ತಿಯರ ಆಯ್ದ ವಚನಗಳನ್ನು ವಾಚನ ಮತ್ತು ವ್ಯಾಖ್ಯಾನ ಮಾಡಿದರು.
ದೇಹವನ್ನು ದೇಗುಲ ಮಾಡಿಕೊಂಡು, ಪ್ರಜ್ಞೆಯನ್ನು ಪರಮಾತ್ಮನಾಗಿಸಿಕೊಳ್ಳುವುದು, ಕಾಯಕವನ್ನೇ ಕೈಲಾಸ ಮಾಡಿಕೊಳ್ಳುವುದು, ನಾವು ಇರುವ ಜಾಗವನ್ನು ಪ್ರತಿಕ್ಷಣ ಸ್ವರ್ಗವಾಗಿಸಿಕೊಳ್ಳುವುದೇ ಆಧ್ಯಾತ್ಮ. ನಮ್ಮೊಳಗೆ ಇರುವ ಆತ್ಮ ಚೈತನ್ಯವೇ ಎಲ್ಲರೊಳಗೂ ಇದೆ ಎಂಬುದನ್ನು ಕಂಡುಕೊಂಡರೆ ನಾವು ವರ್ಗಬೇಧ, ಜಾತಿಭೇದ ಮತ್ತು ವರ್ಣಭೇದ ಮಾಡುವುದಿಲ್ಲ ಎಂದರು.
12ನೇ ಶತಮಾನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಂತಹದ್ದೇ ತತ್ವವನ್ನಿಟ್ಟುಕೊಂಡು ಲಕ್ಷಾಂತರ ಜನ ಕರ್ನಾಟಕದ ಕಲ್ಯಾಣದಲ್ಲಿ ಸೇರಿದರು. ಕಾಶ್ಮೀರದ ರಾಜಮೋಳಿಗೆ ಮಾರಾಯ ಎಂಬ ಹೆಸರಿಂದ ಸೌದೆ ಹೊಡೆಯುವ ಕಾಯಕದಲ್ಲಿ ನಿರತನಾದ ಆತನ ತಂಗಿ ಬೋಂತಾದೇವಿ ಕಲ್ಯಾಣಕ್ಕೆ ಬಂದು ಒಂದು ಪ್ರಜ್ಞೆ ಆಗಿ ಕೆಲಸ ಮಾಡಿದರು. ದೇವರು ಎಂದರೆ ನಂಬಿಕೆ ಅಲ್ಲ, ನಡವಳಿಕೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ವಚನಕಾರರು ಎಂದು ಹೇಳಿದರು.
ಮೈಸೂರಿನ ಹಿಂದುಳಿದ ವರ್ಗಗಳ ಇಲಾಖೆ ಅಧೀಕ್ಷಕಿ ರಮ್ಯಾ ಮಾತನಾಡಿ, ಮನುಷ್ಯತ್ವದ ಮರುಸ್ಥಾಪನೆಯ ಆಶಯವನ್ನು ಹೊಂದಿರುವ ಕಾವ್ಯಾನು ಸಂಧಾನ ಅರ್ಥಪೂರ್ಣವಾಗಿದೆ. ಇದು ವರ್ತಮಾನಕ್ಕೆ ಅಗತ್ಯವಾಗಿದೆ ಎಂದರು.
ಕರ್ನಾಟಕ ಸಂಘದ ಡಾ.ಎಂ.ಎಸ್.ಅನಿತಾ, ರಾಜೇಶ್ವರಿ, ಡಾ.ದೇವಿಕಾ, ಪ್ರೊ.ಶ್ರೀದೇವಿ, ಎಸ್.ಬಿ.ಶಂಕರೇಗೌಡ, ವೆಂಕಟೇಶ್, ಚಂದ್ರಕಲಾ ಇತರರಿದ್ದರು. ಇದೇ ವೇಳೆ ಸಂಗೀತ ಶಾಲೆಯ ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತಪಡಿಸಿದರು.