

ಮಂಡ್ಯ: ಕಾವ್ಯಾನುಸಂಧಾನ ಕಾರ್ಯಕ್ರಮ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಭದ್ರಬುನಾದಿಯಾಗುತ್ತದೆ ಎಂದು ಪ್ರಗತಿಪರ ಚಿಂತಕಿ ಮಂಜುಳ ಜಯಪ್ರಕಾಶಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ’ಕಾವ್ಯಾನು ಸಂಧಾನ’ ಕಾರ್ಯಕ್ರಮದಲ್ಲಿ ಕವಿತೆಯ ಓದು, ಗಾಯನ, ವ್ಯಾಖ್ಯಾನ, ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಕಾವ್ಯಗಳ ಓದು, ಗಾಯನ, ವ್ಯಾಖ್ಯಾನ ಸಂವಾದ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದು ಸಹೃದಯರಿಗೆ ಕಾವ್ಯವನ್ನು ದಾಟಿಸುವ ಸಾರ್ವಜನಿಕರಲ್ಲಿ ಸಾಹಿತ್ಯಾಸಕ್ತಿಯನ್ನು ಉಂಟು ಮಾಡುವ ಉದ್ದೇಶವನ್ನು ಹೊಂದಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎನ್ನುವಂತೆ ಹಿರಿಯರು-ಕಿರಿಯರು ಎಲ್ಲ ಸೇರಿ ಕಾವ್ಯವನ್ನು ಕುರಿತು ಚರ್ಚಿಸುವ ಮತ್ತು ಚಿಂತಿಸುವ ಕ್ರಮ ಆರೋಗ್ಯಕರವಾಗಿದೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಶಿಕ್ಷಣಾಧಿಕಾರಿ ಡಾ.ಎಸ್.ಸಿ.ಮಂಗಳಾ, ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ, ಎಂ.ಮಂಚಶೆಟ್ಟಿ, ಚೆಲುವರಾಜು, ಆನಂದ್ ಇತರರಿದ್ದರು.