ಮನುಷ್ಯನ ಕೊಂದು ಸಮಾಜ ನಿರ್ಮಾಣ ಅಸಾಧ್ಯ: ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಅಭಿಮತ

1 (5)
Published on

ಮಂಡ್ಯ: ಮನುಷ್ಯನನ್ನು ಕೊಂದು ಅವರ ಸಮಾಧಿಯ ಮೇಲೆ ಸಮೃದ್ಧ ಹಾಗೂ ಆರೋಗ್ಯ ಸಮಾಜವನ್ನು ಕಟ್ಟುತ್ತೇನೆ ಎನ್ನುವುದು ದೊಡ್ಡ ಭ್ರಮೆ ಎಂದು ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘದ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಕಾವ್ಯಾನು ಸಂಧಾನ ಕಾರ್ಯಕ್ರಮದ ಕವಿತೆಯ ಓದು, ಗಾಯನ, ವ್ಯಾಖ್ಯಾನ, ಸಂವಾದದಲ್ಲಿ ರನ್ನನ ಗದಾಯುದ್ಧ ಕುರಿತು ಮಾತನಾಡಿದ ಅವರು, ಎರಡನೇ ಮಹಾಯುದ್ಧ ನಡೆಯಿತು, ಹಾಗೆಯೇ 60ರ ದಶಕದಲ್ಲಿ ಚೀನಾ ಮತ್ತು ಭಾರತ ಯುದ್ಧ ನಡೆಯಿತು. ಇದಲ್ಲದೆ ಇರಾನ್ ಹಾಗೂ ಇರಾಕ್ ಯುದ್ಧಗಳು ನಡೆದವು. ಇಂತಹ ಯುದ್ಧಗಳಿಂದ ಮನುಷ್ಯನ ಜೀವನ ಅಸ್ತವ್ಯಸ್ತವಾಯಿತು. ಆದ್ದರಿಂದ ಮಾನವನ ಬದುಕನ್ನೇ ಛಿದ್ರಗೊಳಿಸುವ ಯುದ್ಧಗಳು ಬೇಕೆ?. ಯುದ್ಧ ಬೇಡ ಎನ್ನುವುದನ್ನು ರನ್ನನ ಗದಾಯುದ್ಧ ಸಾರುತ್ತದೆ ಎಂದು ಹೇಳಿದರು.

ಪ್ರಾಚೀನ ಕಾಲದಿಂದಲೂ ಸಮಾಜ ಯುದ್ಧ ಎನ್ನುವ ಪೆಡಂಭೂತವನ್ನು ಸಲಹುತ್ತಾ ಬಂದಿದೆ. ಆಧುನಿಕ ಸಮಾಜದಲ್ಲೂ ಈ ಭೂತ ಜನಗಳನ್ನು ಹಿಡಿದಿದೆ. ಮುಂದುವರೆದ ರಾಷ್ಟ್ರಗಳು ಸ್ವಲ್ಪ ಶಕ್ತಿಯುತ ಎನ್ನುವ ರಾಷ್ಟ್ರಗಳು ತಮ್ಮ ಸಾವ್ರಾಜ್ಯವನ್ನು ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಕೈಗಾರಿಕೋದ್ಯಮವನ್ನು ಬಹಳ ದೊಡ್ಡದಾಗಿ ಬೆಳೆಸಿಕೊಳ್ಳುವುದಕ್ಕೆ ಈಗಾಗಲೇ ಹೆಸರು ಮಾಡಿರುವ ದೇಶಗಳ ಮೇಲೆ ಯುದ್ಧವನ್ನು ಸಾರುವುದು ನಡೆಯುತ್ತಿದೆ. ರನ್ನ ಕವಿ ಸಿಂಹಾವಲೋಕನ ಕ್ರಮದಲ್ಲಿ ಗದಾಯುದ್ಧವನ್ನು ಬರೆದು ಇಡೀ ಮಹಾಭಾರತದ ಕಥೆಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ದುರ್ಯೋಧನ ವಿಲಾಪ ಯುದ್ಧದ ನಿಸ್ಸಾರತೆಯನ್ನು ಹೇಳುತ್ತದೆ ಎಂದು ವಿವರಿಸಿದರು.

ಆಧುನಿಕ ಜಗತ್ತಿನಲ್ಲಿ ಹಲವು ಬಾಂಬುಗಳನ್ನು ಕಂಡುಹಿಡಿದಿದ್ದಾರೆ. ಯಾವ ರಾಷ್ಟ್ರ? ಯಾವಾಗ ಯುದ್ಧವನ್ನು ಸಾರುತ್ತದೋ? ಎನ್ನುವ ಭಯದಲ್ಲಿ ನಾವು ಬದುಕಬೇಕಿದೆ. ದುರ್ಯೋಧನ ವ್ಯಕ್ತಿತ್ವವನ್ನು ರನ್ನ ಹಲವು ಪದ್ಯಗಳಲ್ಲಿ ಚಿತ್ರಿಸಿದ್ದಾರೆ. ದುರ್ಯೋಧನ ತಂದೆ- ತಾಯಿಗೆ ಒಳ್ಳೆಯ ಮಗನಾಗಿದ್ದ, ಹೆಂಡತಿಗೆ ಒಳ್ಳೆಯ ಗಂಡನಾಗಿದ್ದ, ತಮ್ಮಂದಿರಿಗೆ ಒಳ್ಳೆಯ ಅಣ್ಣನಾಗಿದ್ದ, ಪ್ರಜೆಗಳಿಗೆ ಒಳ್ಳೆಯ ರಾಜನಾಗಿದ್ದ. ಆದರೆ ಪಾಂಡವರಿಗೆ ಮಾತ್ರ ರಾಜ್ಯದಲ್ಲಿ ಭಾಗ ಕೊಡುವುದಿಲ್ಲ ಎನ್ನುತ್ತಾನೆ. ಆಧುನಿಕ ಸಮಾಜದಲ್ಲಿ ಕುಟುಂಬದ ಒಳಗೆಯೇ ಆಸ್ತಿಪಾಲು ಮಾಡುವಾಗ ರಕ್ತಪಾತಗಳೇ ನಡೆಯುತ್ತವೆ. ನಾವು ಯುದ್ಧವಿಲ್ಲದ, ನೆಮ್ಮದಿಯ, ಮನುಷ್ಯ ಪ್ರೀತಿಯ ಸಮಾಜವನ್ನು ಕಟ್ಟಬೇಕಿರುವುದು ಇವತ್ತಿನ ತುರ್ತು ಅವಶ್ಯಕವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಡಾ.ಎಂ.ಎಸ್.ಅನಿತಾ, ಡಾ.ಎನ್.ಎಸ್.ದೇವಿಕಾ, ಡಾ.ಮಾ.ರಾಮಕೃಷ್ಣ, ಪ್ರೊ.ಎಸ್.ಬಿ.ಶಂಕರಗೌಡ, ಎಂ.ವಿ.ಧರಣೇಂದ್ರಯ್ಯ, ಪ್ರೊ.ಚಂದ್ರಮ್ಮ, ಡಾ. ಕೆಂಪಮ್ಮ ಕಾರ್ಕಹಳ್ಳಿ, ಡಾ.ಬಿ.ಎಸ್.ಸುದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net