

ಮಂಡ್ಯ: ಸವೆಯುವ ಜೀವನವನ್ನು ಸರಳವಾಗಿ ತೆಗೆದುಕೊಂಡು ಸವಿಯಬೇಕು. ಆದರೆ ಅದರ ಮಹತ್ವ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ವಿಷಾದಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ಮಹಿಳಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕಾವ್ಯಾನುಸಂಧಾನ ಕವಿತೆಯ ಓದು ವ್ಯಾಖ್ಯಾನ ಸಂವಾದದಲ್ಲಿ ‘ಜನಪದ ಕಾವ್ಯದಲ್ಲಿ ಜನಪದ ತ್ರಿಪದಿಗಳು’ ವಿಷಯ ವ್ಯಾಖ್ಯಾನಿಸಿ ಮಾತನಾಡಿದರು. ನಮ್ಮ ಜೀವನದ ಬೇರುಗಳನ್ನು ಹುಡುಕಬೇಕಿದೆ, ಅದು ಯಾವ ಬೇರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಜ್ಞಾನವನ್ನು ಅರಿತು ಬಾಳುವುದು ಒಂದು ಘಟ್ಟ. ಮಹಿಳಾ ವೇದಿಕೆಯಿಂದ ಕಾವ್ಯಾನುಸಂಧಾನ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.
ನಮ್ಮೊಳಗಿರುವ ಅನುಭಾವಿ ರಾಜಕಾರಣಿಗಳು, ತತ್ವಪದಗಾರರನ್ನ ಅನುಭವಿ ರಾಜಕಾರಣಿಗಳು ಎನ್ನುತ್ತೇವೆ. ಈ ಪದವನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಹೇಳುತ್ತೇನೆ, ಅವರಿಗೆ ನೈತಿಕತೆ ಹೆಚ್ಚಿದೆ. ಅವರ ಮಾತುಗಳಲ್ಲಿಯೇ ಕಾಣುತ್ತದೆ. ಅವರು ಸೌಮ್ಯವಾಗಿ ಮಾತನಾಡುತ್ತಾರೆ. ರಾಜಕಾರಣದಲ್ಲಿ ವಿಸ್ತರಿಸುವ ಮೂಲಕ ಅದರಲ್ಲಿನ ಒಳ ಸಂಚುಗಳನ್ನು ಎಳೆಎಳೆಯಾಗಿ ಹೇಳುತ್ತಾ ಹೋಗುತ್ತಾರೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಜನಪದ ಲೋಕದಲ್ಲಿ ಕಳೆದು ಹೋಗುವಂತಹ ಕಾರ್ಯಕ್ರಮ ಇದಾಗಿದೆ. ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ಇದನ್ನು ನೆನೆದುಕೊಳ್ಳುವುದಕ್ಕೂ ಸಾಧ್ಯವಾಗದ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಜನಪದ ಹಾಡುಗಳೇ ಸೊಗಸಾಗಿದ್ದವು. ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದ ಜನಪದ ಹಾಡುಗಳು ಮರೆಯಗಾಗಿವೆ. ಅಕ್ಷರ ವಂಚಿತರಿಂದ ಬಂದಂತಹ ವಿವೇಕ ಇರುವ ಜನಪದವನ್ನು ಮರೆಯುತ್ತಿರುವುದು ಬೇಸರ ತರಿಸಿದೆ ಎಂದರು.
ಮನುಷ್ಯನ ಮನಸ್ಸನ್ನು, ಸಾಹಿತ್ಯದಿಂದ ತನ್ನೆಡೆಗೆ ಸೆಳೆಯುವುದೇ ಸಂಗೀತವಾಗಿದೆ. ಬೇರೆ ದೇಶಗಳಲ್ಲಿ ಹಾಡು ಹೇಳುತ್ತಲೇ ಹುಚ್ಚರಾಗಿದ್ದಾರೆ. ಆದರೆ ಭಾರತ ದೇಶದ ಸಂಗೀತ, ಕಲೆ ಹಾಗೂ ಸಾಹಿತ್ಯ ಮೆಚ್ಚುವಂತಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಅನ್ನ, ಅಕ್ಷರ ಇವೆಲ್ಲವನ್ನೂ ಕೊಟ್ಟಂತಹ ಭೂಪ, ಇವರು ಭಾರತ ದೇಶದ ಯಾವ ರಾಜರು ಮಾಡದ ಕೆಲಸ ಮಾಡಿ ಹೋಗಿದ್ದಾರೆ, ಇವರ ಋಣ ನಮ್ಮ ಮೇಲಿದೆ ಎಂದು ನೆನಪಿಸಿದರು.
ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ಕಾರ್ಯದರ್ಶಿ ಅನಿತಾ ಮಂಗಲ ಇದ್ದರು. ಇದೇ ಸಂದರ್ಭದಲ್ಲಿ ಗುರು ದೀಕ್ಷ ಗೀತೆಗಳನ್ನು ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಡಿ ರಂಜಿಸಿದರು.