

ಮಂಡ್ಯ: ಗದ್ಯಕ್ಕಿಂತ ಪದ್ಯವು ಪ್ರವರ್ಧಮಾನವಾಗಿದೆ. ಪಾತ್ರಗಳನ್ನು ಗದ್ಯವು ವಿವರವಾಗಿ ತಿಳಿಸಿದರೆ, ಕಾವ್ಯವು ಅನುಸಂಧಾನವಾಗಿ ಅರ್ಥವನ್ನು ಒತ್ತಿ ಹೇಳುವ ಮೂಲಕ ಮೊದಲನೆ ಸ್ಥಾನದಲ್ಲಿದೆ ಎಂದು ಹಿರಿಯ ಸಾಹಿತಿ ಡಾ.ರಾಗೌ ಪ್ರತಿಪಾದಿಸಿದರು.
ನಗರದ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾವ್ಯಾನುಸಂಧಾನ ಮತ್ತು ಕವಿತೆಯ ಓದು ವ್ಯಾಖ್ಯಾನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾವ್ಯ ಮೊದಲನೇ ಸ್ಥಾನವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಅರಿಸ್ಟಾಟಲ್ ಅವರ ಕಾಲದಿಂದಲೂ ಕಾವ್ಯ ಮುಂಚೂಣಿಯನ್ನು ಕಾಯ್ದುಕೊಂಡಿದೆ ಎಂದರೆ ತಪ್ಪಾಗಲಾರದು ಎಂದು ವಿವರಿಸಿದರು.
ಕಾವ್ಯದ ಓದು ಎನ್ನುವುದು ಆಗುವ ಅನುಭವದ ಜತೆಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದೆ. ಪದ್ಯ ರಚನೆಯಲ್ಲಿಯೇ ಗದ್ಯಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಯಾವುದೇ ಒಂದು ಕಾದಂಬರಿಯ ಹತ್ತಾರು ಸಾಲುಗಳನ್ನು ಇಟ್ಟುಕೊಳ್ಳಲು ಕಷ್ಟ. ಆದರೆ, ಪದ್ಯದ ಸಾಲುಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು, ಕಾವ್ಯ ರಚನೆಯ ಮಜಲುಗಳೇ ಅಷ್ಟರ ಮಟ್ಟಿಗೆ ಸುಲಭವಾಗಿ ಕಾಣಸಿಗುತ್ತವೆ. ಪಠ್ಯವನ್ನು ಓದುವಾಗ ಗಟ್ಟಿಯಾಗಿ ಓದಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದನ್ನು ವಿಮರ್ಶಿಸಿ ಓದುವಿಕೆ, ಮರು ಓದುವಿಕೆ ಇವೆಲ್ಲವೂ ನಶಿಸುತ್ತಿವೆ. ಮನಸ್ಸಿನಲ್ಲಿಯೇ ಓದಿ ಪರಿಣಾಮಕಾರಿಯಾಗಿ ಗ್ರಹಿಸಿಕೊಂಡಿರುವ ಉದಾಹರಣೆಗಳು ಸಿಗುತ್ತವೆ. ಕಾವ್ಯವನ್ನು ವಿಶ್ಲೇಷಿಸಿ ತಿಳಿದುಕೊಳ್ಳಲು ಮನಸಿಗೆ ರವಾನೆಯಾಗುವ ರೀತಿ ಗಮನ ಹರಿಸಬೇಕು ಎಂದರು.
ಸಾಹಿತಿ ಮ.ರಾಮಕೃಷ್ಣ ಮಾತನಾಡಿ, ವಾಸ್ತವವಾಗಿ ಕಾವ್ಯವೇ ಶ್ರೇಷ್ಟವಾಗಿದೆ. ಗದ್ಯ, ಕವಿತೆ, ಕಾವ್ಯ ಎಲ್ಲವೂ ಸಾಹಿತ್ಯ ಪ್ರಕಾರಗಳಲ್ಲಿ ಕಾಣುತ್ತವೆ. ಇವು ಹೆಚ್ಚು ಜನಕ್ಕೆ ಪ್ರಿಯವಾದವು ಆಗಿವೆ. ಕಾವ್ಯವು ನಗುವಂತೆ, ಅಳುವಂತೆ ಹಾಗೂ ಆಕಳಿಸುವಂತೆಯೂ ಮಾಡುತ್ತದೆ ಎಂಬ ಮಾತನ್ನು ಖ್ಯಾತ ಕವಿಯೊಬ್ಬರು ಹೇಳಿದ್ದಾರೆ. ಆಕಳಿಸುವುದು ಅರಸಿಕರಿಗೆ ಮಾತ್ರ ಅದು ಅನ್ವಯ. ರಸಿಕರಾದವರಿಗೆ ನಗು ಹಾಗೂ ಅಳುವನ್ನು ತರುವ ಒಂದು ಮಹತ್ವ ಪೂರ್ಣವಾದಂತಹ ಸಾಧನವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕವಯಿತ್ರಿ ಡಾ.ಶುಭಶ್ರೀ ಪ್ರಸಾದ್ ಅವರು ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅವರ ಒಂದು ಹೂ ಹೆಚ್ಚಿಗೆ ಇಡುತೀನಿ ಎಂಬ ಕವಿತೆ ವಾಚನ ಮಾಡಿದರೆ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ ಅವರು ವ್ಯಾಖ್ಯಾನಿಸಿದರು. ಕರ್ನಾಟಕ ಸಂಘಧ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇದ್ದರು.