ಕಾವ್ಯದ ಮೂಲಕ ಸಮಾಜದ ತಾರತಮ್ಯ ಅನಾವರಣಗೊಳ್ಳಬೇಕು: ಡಾ. ಎಚ್.ಎಲ್. ಪುಷ್ಪ

Kavya yana devatige
Published on

ಬೆಂಗಳೂರು: ಮನಸ್ಸಿಗೆ ನೆಮ್ಮದಿ ನೀಡುವ ಕಾವ್ಯವು ಹೋರಾಟಕ್ಕೆ ಶಕ್ತಿಯನ್ನೂ ನೀಡಲಿದೆ. ಹಾಗಾಗಿ ಸಮಾಜದಲ್ಲಿರುವ ತಾರತಮ್ಯಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸಬೇಕಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ಹೇಳಿದರು.

ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಂಗ ಮಂಡಲ ಸಹಯೋಗದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಕಾವ್ಯ ಸಂಸ್ಕೃತಿ ಯಾನ - ರಾಜಧಾನಿ ಬೆಂಗಳೂರಿನಿಂದ ಧಾರವಾಡದ ಸಾಧನಕೇರಿ ಕಡೆಗೆ ಕಾವ್ಯ ದೀವಟಿಗೆಯ ಪಯಣ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸೂಕ್ಷ್ಮ ಸಂವೇದನೆಗಳೊಂದಿಗೆ ಕಾವ್ಯ ಜಗತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಮತ್ತು ಮನುಷ್ಯ ಕೇಂದ್ರಿತವಾಗದೆ ಜೀವಕೇಂದ್ರಿತವಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಮೇಲಿನ ಶೋಷಣೆ ಹಾಗೂ ಪ್ರಸ್ತುತ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನ ನಿವಾರಿಸುವಂತಹ ನೆಮ್ಮದಿಯ ನಾಳೆಗಳನ್ನು ಕಾಣಿಸುವಂತಹ ಕಾವ್ಯಗಳನ್ನು ರಚಿಸಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಸಾಹಿತ್ಯ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಅಕ್ಷರ ಪರಂಪರೆಯಲ್ಲಿ ಕವಿಯು ತನ್ನ ಚಹರೆಯೊಂದಿಗೆ ಜನವಾಣಿಯಾಗುವಂತೆ ಮತ್ತು ಸ್ವಭಾವೋಕ್ತಿಯ ಭಾಷಾ ಪದಮೈತ್ರಿಯೊಂದಿಗೆ ಕಾವ್ಯವನ್ನು ಬರೆಯಬೇಕು. ಹಿಂಸೆ, ಕ್ರೌರ್ಯ, ಸಾಂತ್ವನ, ಹೋರಾಟ, ಪ್ರತಿಸ್ಪಂದನಗಳಿಗೆ ಕಾವ್ಯ ಜಗತ್ತು ತೆರೆದುಕೊಳ್ಳಬೇಕು. ಆ ಮೂಲಕ ಕಾವ್ಯ ಸಂಸ್ಕೃತಿಯು ವ್ಯಕ್ತಿಗತ ನೆಲೆಯಿಂದ ಜಾಗತಿಕ ವ್ಯಾಪ್ತಿಗೆ ಹರಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಎಚ್.ಎಲ್. ಪುಷ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಸವರಾಜ ಸಾದರ ಅವರಿಗೆ ಧಾರವಾಡದ ಸಾಧನಕೇರಿಗೆ ಕೊಂಡೊಯ್ಯಲು ದೀವಟಿಗೆಯನ್ನು ಹಸ್ತಾಂತರಿಸಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ರಂಗಮಂಡಲದ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ರಾಜಶೇಖರ ಮಠಪತಿ, ಡಾ. ಬೇಲೂರು ರಘನಂದನ್, ತಿರುಮಲಾಪುರ ನಾರಾಯಣ್, ಶಾಂತ ಜಯಾನಂದ, ಕೋಮಲ ಮಡಿವಾಳ, ಡಾ. ಶೋಭಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net