

ರಾಜೇಶ್ ಶೆಟ್ಟಿ ದೋಟ ಮಂಗಳೂರು
ಲಾಕ್‌ಡೌನ್ ಏಕತಾನತೆ ಮರೆಯಲು, ಮನೆಯಲ್ಲಿದ್ದು ಹೊರ ಜಗತ್ತಿನೊಂದಿಗೆ ಕನೆಕ್ಟ್ ಆಗಲು ವೇದಿಕೆಯಾಗಿರುವ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವಿವಿಧ ಚಟುವಟಿಕೆಗಳು ಸಖತ್ ಸದ್ದು ಮಾಡುತ್ತಿವೆ. ಈ ಮಧ್ಯೆ ಸಾಹಿತ್ಯ ಹಾಗೂ ಸೃಜನಾತ್ಮಕ ಚಟುವಟಿಕೆಗೆ ಪೂರಕವಾಗಿ ಕರಾವಳಿಗರು ಆರಂಭಿಸಿರುವ ವಿವಿಧ ಭಾಷೆಯ ಕವನ ವಾಚನ, ಗಾಯನ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ.
ತುಳು, ಕನ್ನಡ, ಅರೆಭಾಷೆ, ಕೊಂಕಣಿಯಲ್ಲಿ ಆರಂಭಗೊಂಡಿರುವ ಈ ಅಭಿಯಾನದಲ್ಲಿ ದೇಶ, ವಿದೇಶಗಳ ವಿವಿಧ ವಯೋಮಾನದ ಸಾವಿರಾರು ಮಂದಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಪ್ರತಿಭೆ ಪ್ರದರ್ಶನ, ಸಾಹಿತ್ಯ ಪ್ರೀತಿ ಜತೆಗೆ ಭಾಷಾ ಬೆಳವಣಿಗೆಗೂ ವೇದಿಕೆ ಒದಗಿಸಿದೆ.
ಸಾಹಿತ್ಯಾಸಕ್ತರು ಸ್ವರಚಿತ ಅಥವಾ ಇತರರ ಕವನ ವಾಚಿಸಿದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಬೇಕು. ಜತೆಗೆ ಮುಂದಿನ ಕವನಕ್ಕೆ ಇನ್ನೊಬ್ಬರ ಹೆಸರನ್ನು ನಾಮಿನೇಟ್ ಮಾಡಬೇಕು. ಅವರು ಮುಂದುವರಿಸಿದ್ದಲ್ಲಿ ಕೊಂಡಿ ವಿಸ್ತಾರವಾಗುತ್ತಾ ಸಾಗುತ್ತದೆ. ಅಂತೆಯೇ ಆಯೋಜಕರು ಈ ಕವನಗಳನ್ನು ಸಂಕಲನ ರೂಪದಲ್ಲಿ ಗ್ರೂಪ್ ಅಥವಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದು ಒಂದು ರೀತಿ ಡಿಜಿಟಲ್ ಸಂಗ್ರಹವಾಗಿಯೂ ದಾಖಲಾಗುತ್ತದೆ.
ತುಳು ಕಬಿತೆ, ಅರೆಭಾಷೆ ಪದ್ಯದಂಗಡಿ
ತುಳು ಭಾಷೆಯಲ್ಲಿ ಅಕ್ಷತಾರಾಜ್ ಪೆರ್ಲ ಫೇಸ್‌ಬುಕ್‌ನಲ್ಲಿ ಆರಂಭಿಸಿದ ‘ತುಳು ಕಬಿತೆ ಸಂಚಿ’ಗೆ ಕೇವಲ 7 ದಿನದಲ್ಲಿ 75 ಕವಿಗಳು ದನಿಗೂಡಿಸಿದ್ದಾರೆ. ದೇಶ, ವಿದೇಶದ ತುಳು ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಸಾಹಿತ್ಯ ಕೃಷಿಗೆ ಕೈಜೋಡಿಸಿದ್ದಾರೆ. ಶಶಿರಾಜ್ ಕಾವೂರು ಆರಂಭಿಸಿದ ‘ತುಳು ಕಬಿತೆ’ಯಲ್ಲಿ ಹಿರಿಯ ಕವಿಗಳ ಕವನ ವಾಚಿಸಿ ಬಳಿಕ ರಾಗ ಸಂಯೋಜಿಸಿ ಹಾಡಲು ಇನ್ನೊಬ್ಬರನ್ನು ನಾಮಿನೇಟ್ ಮಾಡಲಾಗುತ್ತದೆ. ಕೆಲವರು ಇದಕ್ಕೆ ನೃತ್ಯ ಸಂಯೋಜನೆಯನ್ನೂ ಮಾಡಿ ಗಮನ ಸೆಳೆದಿದ್ದಾರೆ. ಡಾ.ಕುಶ್ವಂತ್ ಕೋಳಿಬೈಲು ಹುಟ್ಟು ಹಾಕಿದ ‘ಅರೆಭಾಷೆ ಪದ್ಯದಂಗಡಿ’ಯಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿ ಭಾಗವಹಿಸಿ ಅರೆಭಾಷೆ ಕಂಪನ್ನು ಕವನ ರೂಪದಲ್ಲಿ ಜಗದಗಲ ಹಬ್ಬುತ್ತಿದ್ದಾರೆ. ಕೊಂಕಣಿಯಲ್ಲಿ ಫಾ.ಜೊ.ಸಿ ಸಿದ್ದಕಟ್ಟೆ ಆರಂಭಿಸಿರುವ ‘ಕವಿತಾ ಸಾಂಕಲ್’ನಲ್ಲಿ ಈಗಾಗಲೇ 150ಕ್ಕೂ ಅಧಿಕ ಮಂದಿ ಕೊಂಕಣಿ ಕವಿತೆ ವಾಚಿಸಿ ಅಭಿಯಾನಕ್ಕೆ ಮೆರುಗು ತುಂಬಿದ್ದಾರೆ. ಇದರ ವಿಡಿಯೋವನ್ನು ‘ಕವಿತಾ ಮಾಟೊವ್’ ಫೇಸ್‌ಬುಕ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿ ಮುಂದಿನ ಕವನ ವಾಚನಕ್ಕೆ ಖೋ ನೀಡಲಾಗುತ್ತದೆ. ತೆಂಕು ಹಾಗೂ ಬಡಗು ಯಕ್ಷಗಾನ ಭಾಗವತಿಗೆ ಸಂಬಂಧಿಸಿದ ‘ಬೀಗದ ಭಾಗವತರು’ ಭಾಗವತಿಕೆ ಚಾಲೆಂಜ್ ಅಭಿಯಾನ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. ಶೇಷಕೃಷ್ಣ ಭಟ್ ಮತ್ತು ಸುಧಾಕರ ಜೈನ್ ಹೊಸಬೆಟ್ಟುಗುತ್ತು ಇದಕ್ಕೆ ಮುನ್ನುಡಿ ಬರೆದಿದ್ದಾರೆ.
ಭಾವಗೀತೆಗಳ ‘ಸಂ’ಯೋಚನೆ ಗಾಯಕ ಪ್ರವೀಣ್ ಡಿ.ರಾವ್ ಆರಂಭಿಸಿರುವ ‘ಸಂ’ಯೋಚನೆ ಕನ್ನಡದ ನೂರಾರು ಉದಯೋನ್ಮುಖ ಕವಿಗಳ ಭಾವಗೀತೆಗಳನ್ನು ಆಹ್ವಾನಿಸಿ, ಅದನ್ನು ಗಾಯಕರಿಗೆ ರಾಗ ಸಂಯೋಜಿಸಿ ಹಾಡಲು ಆಹ್ವಾನ ನೀಡುವ ಮೂಲಕ ವೈವಿಧ್ಯಮಯ ಕಾವ್ಯ ಸಂಗ್ರಹಕ್ಕೆ ವೇದಿಕೆ ಒದಗಿಸಿದೆ.
ಈ ಅಭಿಯಾನ ಮೂಲಕ ಲಾಕ್‌ಡೌನ್ ಸಮಯ ಸದುಪಯೋಗವಾಗುತ್ತಿದೆ. ಕವನ ಸೃಷ್ಟಿ ಮತ್ತು ವಾಚನಕ್ಕೆ ಹೊಸ ಆಯಾಮ ನೀಡಿದೆ. ಹಿರಿಯ ಮತ್ತು ಕಿರಿಯ ಕವಿಗಳು ಜಾಲತಾಣ ಮೂಲಕ ಪರಸ್ಪರ ಕಲೆಯುವ ಮತ್ತು ಕಲಿಯುವ ಅವಕಾಶ ಕಲ್ಪಿಸಿದೆ. ತುಳುವಿನಲ್ಲಿ ಕವನ ರಚನೆಗೆ ಸಿಕ್ಕಿದಷ್ಟು ಅವಕಾಶ ಮತ್ತು ಪ್ರಾಶಸ್ತ್ಯ ವಾಚನಕ್ಕೆ ಸಿಕ್ಕಿರಲಿಲ್ಲ. ಜತೆಗೆ ಕವನದ ಅರ್ಥ, ಧಾಟಿ, ಧ್ವನಿ, ನಾಟಕೀಯತೆ ಇವೆಲ್ಲ ಪ್ರಕಟವಾಗಲು ವಾಚನ ಪರಿಣಾಮಕಾರಿ. ಡಾ.ಬಿ.ಎ.ವಿವೇಕ ರೈ, ವಿಶ್ರಾಂತ ಕುಲಪತಿ ಮನೆಯಲ್ಲೇ ಕುಳಿತಿರುವ ಸಂದರ್ಭ ಸಾಹಿತ್ಯಾಸಕ್ತರು ಒಬ್ಬರಿಗೊಬ್ಬರು ಪರಿಚಯವಾಗಲಿ. ಆ ಮೂಲಕ ಹೊಸ ಯೋಚನೆ ಹುಟ್ಟಲಿ ಎಂಬ ನೆಲೆಯಲ್ಲಿ ‘ತುಳು ಕಬಿತೆ ಸಂಚಿ’ ಆರಂಭಿಸಿದ್ದೇವೆ. ಈ ಪ್ರಯೋಗಕ್ಕೆ ಹಿರಿಯ ಸಾಹಿತಿಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಅಕ್ಷತಾರಾಜ್ ಪೆರ್ಲ, ಸಾಹಿತಿ