

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೈಂದೂರು ತಾಲೂಕಿನ ಕಾವ್ರಾಡಿ ಗ್ರಾಮದ ಮುಂಬಾರು ದಿನಕರ ಶೆಟ್ಟಿ ಎಂಬುವರು ಅರ್ಧ ಎಕರೆ ಜಾಗದಲ್ಲಿ ಥರಹೇವಾರಿ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ಮೂರು ವರ್ಷದ ಹಿಂದೆ ಅರ್ಧ ಎಕರೆ ಗುಡ್ಡ ಪ್ರದೇಶದಲ್ಲಿ ನಾಲ್ಕು ಅಡಿ ಆಳದ ನೇರ ಕಂದಕಗಳನ್ನು ತೋಡಿ, 10 ಅಡಿಗೊಂದರಂತೆ ಶ್ರೀಮಂಗಳ, ಇಂಟರ್ ಸಿ ಮಂಗಳ ಅಡಕೆ, ಸುತ್ತ ಹೈಬ್ರೀಡ್ ತೆಂಗಿನ ಗಿಡ ನೆಟ್ಟಿದ್ದಾರೆ. ಜತೆಗೆ ಅಡಕೆ ಸಾಲಿನಲ್ಲಿ ಕಬ್ಬು, ಬಾಳೆ ಹಾಕಿ ಕ್ರಮಬದ್ಧತೆ ಹಾಗೂ ಸುಸ್ಥಿರ ಕೃಷಿಯಲ್ಲಿ ಸ್ವಚ್ಛತೆಯ ಮಹತ್ವವನ್ನು ರೈತರಿಗೆ ತಿಳಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.
ಪ್ರಾರಂಭದ ವರ್ಷ ಉಪ ಬೆಳೆಯಾಗಿ ತರಕಾರಿ, ಕಬ್ಬು, ಅನಾನಸು, ಬಾಳೆ ಹಾಕಿದರು. ಸಮರ್ಪಕ ಸಸ್ಯ ಸಂರಕ್ಷಕ ವಿಧಾನ, ಕ್ರಮಬದ್ಧ ಗೊಬ್ಬರ ನೀಡುವ ಮೂಲಕ ಗಿಡಗಳು ಆರೋಗ್ಯ ಪೂರ್ಣವಾಗಿ ಮೇಲೆದ್ದವು. ಮೂರನೇ ವರ್ಷಕ್ಕೆ ಎಲ್ಲ ಅಡಕೆ ಸಸಿಗಳು ಮೊದಲ ಹೊಂಬಾಳೆ ಬಿಟ್ಟವು. ಮೊದಲ ವರ್ಷವೇ ನಿರೀಕ್ಷೆಗೂ ಮೀರಿ ಇಳುವರಿ ಬಂದಿದೆ. ತೋಟ ಸ್ವಚ್ಛವಾಗಿದ್ದಲ್ಲಿ ಕೊಳೆರೋಗ, ಬ್ಯಾಕ್ಟಿರಿಯಾ ಬಾಧೆಗಳು ಕಡಿಮೆ ಎನ್ನುವುದು ಈ ಯುವ ರೈತ ಕಂಡುಕೊಂಡ ಸತ್ಯ.
ಗುಡ್ಡ ಪ್ರದೇಶವಾದ್ದರಿಂದ ಟ್ರಂಚ್ ಮಾದರಿಯಲ್ಲಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಒಂದು ಮರದಲ್ಲಿ 6ರಿಂದ 10ರವರೆಗೆ ಗೊನೆಗಳು ಲಭಿಸಿದ್ದು, ಸಾವಯವ ಗೊಬ್ಬರದಿಂದ ಉತ್ಕೃಷ್ಟವಾದ ತೋಟ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಪ ಜಮೀನಿನಲ್ಲಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ. ಪ್ರಸ್ತುತ ರಾಸಾಯನಿಕ ಉಪಯೋಗಿಸದೆ ಸಾವಯವ ಮಾದರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಅಡಕೆ ಗಿಡಗಳ ನರ್ಸರಿ ಮಾಡಿದ್ದಾರೆ. ಗುಣಮಟ್ಟದ ಸುಧಾರಿತ ತಳಿಯ ಅಡಕೆ ಗಿಡಗಳನ್ನು ರೈತರಿಗೆ ಸರಬರಾಜು ಮಾಡುವುದು ಇವರ ಉದ್ದೇಶ. ಮಂಗಳ, ಶ್ರೀಮಂಗಳ, ಇಂಟರ್ ಸಿ ಮಂಗಳ, ಮೋಹಿತ್ ನಗರ, ಹೈಬ್ರೀಡ್ ಮೋಹಿತ್ ನಗರ, ಕುಣಿಮಂಗಳ ಗಿಡಗಳು ಇವರಲ್ಲಿ ಲಭ್ಯವಿದೆ. ಶಾಲಾ ಮಕ್ಕಳಿಗೆ ಉಚಿತ ತೆಂಗು ಅಡಕೆ ಸಸಿಗಳ ವಿತರಿಸುವ ಮೂಲಕ ಎಳವೆಯಲ್ಲೇ ಕೃಷಿ ಬಗ್ಗೆ ಆಸಕ್ತರಾಗುವ ಪ್ರಯತ್ನ ನಡೆಯುತ್ತಿದೆ.
ಮೂರೇ ವರ್ಷದಲ್ಲಿ ಅಡಕೆ ಫಸಲು
ಶ್ರೀಮಂಗಳ, ಇಂಟರ್ ಸಿ ಅಡಕೆ ನಾಟಿಗೆ ಮೊದಲು ಕನಿಷ್ಠ ಎರಡೂವರೆ ಅಡಿ ಆಳ ಮತ್ತು ಅಗಲದ ಹೊಂಡ ಮಾಡಿಕೊಳ್ಳಬೇಕು. ಗಿಡದಿಂದ ಗಿಡಕ್ಕೆ 8-9 ಅಡಿ, ಸಾಲಿನಿಂದ ಸಾಲಿಗೆ 10 ಅಡಿ ಅಂತರ ಕೊಡಬೇಕು. ನಾಟಿಯ ಸಂದರ್ಭ ಪ್ರತೀ ಹೊಂಡಕ್ಕೆ 250 ಗ್ರಾಂ ಕಹಿಬೇವಿನ ಹಿಂಡಿ, ಹಟ್ಟಿಗೊಬ್ಬರ, ಕೋಳಿ ಗೊಬ್ಬರ ನೀಡಬೇಕು. ಪ್ರಥಮ ವರ್ಷದಲ್ಲಿ ಮೂರು ಬಾರಿ ಗೊಬ್ಬರ ನೀಡಬೇಕು. ಎರಡನೇ ವರ್ಷದಲ್ಲಿ ಆರು ತಿಂಗಳಿಗೊಮ್ಮೆ ಬುಡ ಮಾಡಿದರೆ ಸಾಕು. ಹೀಗೆ ಕ್ರಮವತ್ತಾಗಿ ಆರೈಕೆ, ಸಸ್ಯಸಂರಕ್ಷಣೆ ಕ್ರಮಗಳನ್ನು ಅನುಸರಿಸಿದರೆ 3ನೇ ವರ್ಷಕ್ಕೆ ಫಲ ಬರುತ್ತದೆ. ಗಂಟು ಬಿಡುತ್ತಿದ್ದಂತೆ ಬೇಸಿಗೆಯಲ್ಲಿ ಗಿಡಕ್ಕೆ ಸುಣ್ಣ ಬಳಿಯಬೇಕು. ಇಲ್ಲದಿದ್ದರೆ ಬಿಸಿಲಿನಿಂದ ಮರ ಒಡೆದು, ಸಾಯುವ ಅಪಾಯವಿದೆ. ಮಾಹಿತಿಗೆ 9449944344 ಸಂಪರ್ಕಿಸಬಹುದು.
ವೃತ್ತಿ ಬೇರೆಯಿದ್ದರೂ ಪ್ರವೃತ್ತಿಯಾಗಿ ಕೃಷಿ ಅನುಸರಿಸಿದರೆ ಮನಸ್ಸಿಗೂ ಖುಷಿ, ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಕೇವಲ ಆರ್ಥಿಕ ದೃಷ್ಟಿಯಿಂದ ಕೃಷಿ ಮಾಡದೆ ಖುಷಿಗಾಗಿ ಮಾಡಿದರೆ ಅದರಿಂದ ಸಿಗುವ ಆನಂದವೇ ಬೇರೆ. ಭೂಮಿಯೆಂದು ನಂಬಿದವರ ಕೈಬಿಡದೆ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಕೊಡುತ್ತದೆ. ಸ್ವತಃ ಕೆಲಸ ಮಾಡುವುದರಿಂದ ಕೃಷಿಯಲ್ಲಿ ಖಂಡಿತ ನಷ್ಟವಾಗುವುದಿಲ್ಲ.
ದಿನಕರ ಶೆಟ್ಟಿ ಮುಂಬಾರು, ಪ್ರಗತಿಪರ ಕೃಷಿಕ ಮತ್ತು ಸಾಮಾಜಿಕ ಕಾರ‌್ಯಕರ್ತ