ದೇವಸ್ಥಾನಗಳ ಅಭಿವೃದ್ಧಿಯಿಂದ ಸಮಾಜಕ್ಕೆ ಕ್ಷೇಮ; ಕಾವೂರು ದೇವಳ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀ ಆಶೀರ್ವಚನ

IMG-20250306-WA0050
Published on

ಮಂಗಳೂರು: ಊರಿನ ಭಕ್ತರು ಜತೆಯಾಗಿ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದಾಗ ಸಮಾಜಕ್ಕೆ ದೇವರ ಅನುಗ್ರಹ ಲಭಿಸಿ ಎಲ್ಲರೂ ಕ್ಷೇಮದಿಂದ ಸಹಬಾಳ್ವೆ ಮಾಡಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನಃಪ್ರತಿಷ್ಟಾಪನಾ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯಲ್ಲಿ ಬುಧವಾರ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆದರೆ ಸಮಾಜವನ್ನು ಮಂಗಳಕರವಾಗಿರುತ್ತದೆ. ಭಕ್ತರು ಹಲವು ಬಗೆಯಲ್ಲಿದ್ದರೂ, ಅವರ ಮನಸ್ಸು ಹಾಗೂ ಹೃದಯ ದೈವೀ ಚಿಂತನೆಗೆ ಒತ್ತು ನೀಡುತ್ತದೆ. ದೇವರೊಬ್ಬನೇ ನಾಮ ಹಲವು ಎಂಬ ಸೂತ್ರದಂತೆ ಸಮಸ್ತ ಭಕ್ತಗಣ ದೇವಸ್ಥಾನದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಪರಿಪೂರ್ಣತೆ ಲಭ್ಯವಾಗುತ್ತದೆ ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕೆ. ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಉಪನ್ಯಾಸ ನೀಡಿದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮರೋಳಿ ಶ್ರೀ ಸೂರ್ಯನಾರಾಯಣ ಕ್ಷೇತ್ರದ ಆಡಳಿತ ಮೊಕ್ತೇಸರ ಗಣೇಶ್ ಶೆಟ್ಟಿ ಜೆಪ್ಪುಗುಡ್ಡೆಗುತ್ತು, ಪದವಿನಂಗಡಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಕಾಮತ್, ಉಡುಪಿ, ಬಾರ್ಕೂರು ಕಚ್ಚೂರ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಆಡಳಿತ ಮೊಕ್ತೇಸರ ಶಿವಪ್ಪ ನಂತೂರು, ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ, ಡಾ.ಕೆ. ಯೋಗೀಶ್, ಬೋಳಾರ ಹಳೆಕೋಟೆ ಮುಖ್ಯಪ್ರಾಣ ದೇವಸ್ಥಾನ ಆಡಳಿತ ಮೊಕ್ತೇಸರ ವಸಂತ ಶೆಟ್ಟಿ, ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್, ಹರಿದ್ವಾರ ಪತಂಜಲಿ ಯೋಗ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಜ್ಞಾನೇಶ್ವರ್ ನಾಯಕ್, ಮಾಜಿ ಮೇಯರ್ ಹರಿನಾಥ್ ಜೋಗಿ, ಪಾಲಿಕೆ ಮಾಜಿ ಸದಸ್ಯರಾದ ಸಂಗೀತ ಆರ್. ನಾಯಕ್, ಶರತ್ ಕುಮಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಮೋಹನ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಅವಿನಾಶ್ ನಾಯ್ಕ್ ಸ್ವಾಗತಿಸಿದರು.ಶಿತೇಶ್ ಕೊಂಡೆ ವಂದಿಸಿದರು. ಪ್ರಿಯಾ ಹರೀಶ್, ಶಿಲ್ಪಾ ಸಂತೋಷ್ ಮತ್ತು ಗುರುಪ್ರಸಾದ್ ಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net