

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಜ.14ರಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದು, ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದ ಬ್ರಹ್ಮ ರಥೋತ್ಸವ ನಡೆಯಿತು.
ಬೆಳಗ್ಗೆ ರುದ್ರಾಭಿಷೇಕ, ರಥ ಕಲಶ, ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮರಥೋತ್ಸವ ಮತ್ತು ಉತ್ಸವ, ಶ್ರೀ ಭೂತಬಲಿ, ಶಯನ, ಕವಾಟ ಬಂಧನ ನಡೆಯಿತು.
ಜ.18ರಂದು ಬೆಳಗ್ಗೆ ಕವಾಟೋದ್ಘಾಟನೆ, ಅಭಿಷೇಕ, ತುಲಾಭಾರ ಸೇವೆ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಮರುಳು ಧೂಮಾವತಿ ಗಗ್ಗರ ಸೇವೆ, ಬಳಿಕ ಬಲಿ ಹೊರಟು ಉತ್ಸವ, ಓಕುಳಿ, ರಥಾರೋಹಣ, ಕಟ್ಟೆ ಪೂಜೆ, ಆವಭೃತ ಅಗ್ನಿಕೇಳಿ, ದೈವದ ಭೇಟಿ, ಧ್ವಜಾವರೋಹಣ, ದೈವಗಳ ನೇಮ ನಡೆಯಲಿದೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ್ ಪ್ರಭು, ಪ್ರಧಾನ ಅರ್ಚಕ ಶ್ರೀನಿವಾಸ ಭಟ್, ಕಾರ್ಯನಿರ್ವಹಣಾಧಿಕಾರಿ ಶ್ವೇತ ಪಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಮಾಗಣೆ ಹತ್ತು ಸಮಸ್ತರು, ದೇವಸ್ಥಾನದ ಸಿಬ್ಬಂದಿ ವರ್ಗ ವರ್ಷಾವಧಿ ಮಹೋತ್ಸವದ ಯಶಸ್ಸಿಗೆ ಸಹಕರಿಸಿದರು.