

ಮಂಗಳೂರು: ಸಾಲಕ್ಕಾಗಿ 2.50 ಕೋ. ರೂ. ಮೌಲ್ಯದ ಸ್ಥಿರಾಸ್ಥಿ ಅಡಮಾನವಿರಿಸಿ ವಂಚಿಸಿದ ಮೂವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಾ ಬಾಳಿಗ, ಶ್ರೀನಿಧಿ ವಾಸುದೇವ ಕಾಮತ್ ಮತ್ತು ವಾಸುದೇವ ಕಾಮತ್ ಎಂಬವರು ಮಹಾರಾಷ್ಟ್ರದಲ್ಲಿ ಡೈರಿ ಫಾರಂ ಮಾಡುವ ಉದ್ದೇಶದಿಂದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮಂಗಳೂರು ಶಾಖೆಯಿಂದ 1.75 ಕೋ.ರೂ ಸಾಲ ಪಡೆದಿದ್ದರು. ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಪ್ರಬಂಧಕರಾಗಿದ್ದು ಮಧ್ವರಾಯ ಭಟ್ ಅವರಿಗೆ ಪರಿಚಿತರು. ಸಾಲಕ್ಕೆ ಜಾಮೀನುದಾರರಾಗಿ ನಿಲ್ಲುವಂತೆ ಕೇಳಿಕೊಂಡಿದ್ದರು. ಅದರಂತೆ ಮಧ್ವರಾಯ ಭಟ್ ಕೆಲವು ಶರತ್ತುಗಳನ್ನು ತಿಳಿಸಿ ಜಾಮೀನುದಾರರಾಗಿ ಸಹಿ ಹಾಕಿದ್ದರು.
ತನ್ನ 2.50 ಕೋ.ರೂ. ಮೌಲ್ಯದ ಸ್ಥಿರಾಸ್ತಿ ಅಡಮಾನ ಇಟ್ಟಿದ್ದರು. ಆರೋಪಿಗಳು ಮುಂದಿನ 6 ತಿಂಗಳೊಳಗೆ ಬದಲಿ ವ್ಯವಸ್ಥೆ ಮಾಡಿ ಬೇರೆ ಸ್ಥಿರಾಸ್ತಿ ಅಡಮಾನವಿಟ್ಟು ಮಧ್ವರಾಯ ಭಟ್ ಅವರ ಆಸ್ತಿಯನ್ನು ಬಿಟ್ಟು ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಆರೋಪಿಗಳು ಸಾಲ ಮರುಪಾವತಿಸದೇ ಇದ್ದುದರಿಂದ ಮಧ್ವರಾಯ ಭಟ್ ಅವರು ಹಣವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದಾಗ ಆರೋಪಿಗಳು ಜೀವಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದರು. ಬ್ಯಾಂಕ್‌ನವರು ಸಾಲ ಪಾವತಿ ಮಾಡುವಂತೆ ಹಾಗೂ ಸ್ಥಿರಾಸ್ತಿ ಮುಟ್ಟುಗೋಲು ಹಾಕುವುದಾಗಿ ನೊಟೀಸು ನೀಡಿದ್ದಾರೆ. ಆರೋಪಿಗಳು ಬ್ಯಾಂಕ್‌ಗೆ ಹಾಗೂ ಮಧ್ವರಾಯ ಭಟ್ ಅವರಿಗೆ ಮೋಸ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.