

ಮಂಗಳೂರು: ಕಾವೂರು ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಾಲಮುಕುಂದ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಿದ್ದು, ನೂರಕ್ಕಿಂತಲೂ ಅಧಿಕ ಮಕ್ಕಳು ಕೃಷ್ಣ ವೇಷಧಾರಿಗಳಾಗಿ ಭಾಗವಹಿಸಿ ಸಂಭ್ರಮಿಸಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಾ.ಧರ್ವಪಾಲನಾಥ ಸ್ವಾಮೀಜಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಮಕ್ಕಳ ಮನವೆಂಬುದು ಬೆಣ್ಣೆಯಿದ್ದಂತೆ. ಇದ್ದನ್ನು ಹೆತ್ತವರು ಸಂಸ್ಕಾರವೆಂಬ ಕಡೆಗೋಲಿನಿಂದ ಕಡೆದು ಉತ್ತಮ ನಾಗರಿಕನಾಗಿ ರೂಪಿಸುವುದು ಅವರ ಕರ್ತವ್ಯ. ಭಗವದ್ಗೀತೆಯನ್ನು ಪ್ರತಿಯೊಬ್ಬ ಹಿಂದುಗಳು ಮನೆಯಲ್ಲಿ ಇಟ್ಟುಕೊಳ್ಳಬೇಕು. ಈ ಧರ್ಮಗ್ರಂಥಗಳು ಬದುಕಿನ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡುತ್ತವೆ ಎಂದರು.
ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಬಿಜಿಎಸ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಸಿ., ಬಿಜಿಎಸ್ ಇಸಿಯ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್, ಬಿಜಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಶ್ವಿನಿ ವಿ. ಕರ್ಕೆರ ಉಪಸ್ಥಿತರಿದ್ದರು. ಅನುಷಾ ಸ್ವಾಗತಿಸಿ, ಸರ್ವಮಂಗಳಾ ವಂದಿಸಿ, ಕವಿತಾ ನಿರೂಪಿಸಿದರು.