ಮನವಿಗಳಿಗೆ ಸ್ಪಂದನೆ ಇಲ್ಲ ಎಂದು ಆಕ್ರೋಶ

19022022 Kavital meeting
Published on

ಕವಿತಾಳ: ಸಮೀಪದ ಗೊಲದಿನ್ನಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಡವಾಗಿ ಆರಂಭವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿರವಾರ ತಹಸೀಲ್ದಾರ್ ವಿಜಯೆಂದ್ರ ಎಸ್.ಹುಲಿನಾಯಕ, ಸರ್ಕಾರದಿಂದ ನಾನಾ ಸವಲತ್ತುಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ತಹಸೀಲ್ದಾರ್ ಭಾಷಣ ತಡೆದು ಮಾತನಾಡಿದ ಶಿವಣ್ಣ ಗೊಲದಿನ್ನಿ, ವೆಂಕಟೇಶ ದೇವತಗಲ್, ಮಾನಪ್ಪ ಗೊಲದಿನ್ನಿ, ಅಮರೇಶ ಬಾಗಲವಾಡ ಹಾಗೂ ಇತರರು ನಾವು ಈಗಾಗಲೇ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಬಹಳಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೆ, ಅದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಸಭೆಗೆ ಜಿಲ್ಲಾಧಿಕಾರಿ ಬರುವುದಾಗಿ ಹೇಳಿದ್ದರಿಂದ ನಾವು ಅವರಿಂದಲೇ ಕೆಲಸ ಮಾಡಿಸಿಕೊಳ್ಳಬೇಕೆಂದು ಬಂದಿದ್ದೇವೆ. ಜಿಲ್ಲಾಧಿಕಾರಿ ಬರುವವರೆಗೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಜಕಮಕಿ ನಡೆಯಿತು. ಜಿಲ್ಲಾಧಿಕಾರಿ ಪರವಾಗಿ ನಾನು ಬಂದಿದ್ದು, ಸಮಸ್ಯೆ ಹೇಳುವಂತೆ ತಹಸೀಲ್ದಾರ್ ಕೋರಿದರು. ಕೆಲವರು ಸಮಸ್ಯೆ ಹೇಳಿದರೆ ಇನ್ನು ಕೆಲವರು ಇವರು ಈಗಾಗಲೇ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಹೊರ ನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net