

ಹುಸೇನ್‌ಬಾಷಾ ಗುಡಗುಂಟಿ
ಕವಿತಾಳ: ಇಲ್ಲಿನ ಹುಸೇನಪುರ ಕ್ರಾಸ್‌ನಿಂದ ಮಸ್ಕಿ ಕ್ರಾಸ್‌ವರೆಗೆ ಕೆಕೆಆರ್‌ಡಿಬಿ ಯೋಜನೆಯಡಿ 21 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಮೂರು ಕಿಮೀ ಮುಖ್ಯರಸ್ತೆ (ದ್ವಿಪಥ ) ವಿಸ್ತರಣೆ ಕಾಮಗಾರಿ ಆರು ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿಗೆ 2024ರ ಅಕ್ಟೋಬರ್ 15ರಂದು ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದ್ದರು. ಬಳಿಕ ಮುಖ್ಯರಸ್ತೆಯನ್ನು ಅಗೆದು ಕಂಕರ್ ಹಾಕಲಾಯಿತು. ಚರಂಡಿ ನಿರ್ಮಾಣವನ್ನೂ ಪೂರ್ಣಗೊಳಿಸದೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ಆರು ತಿಂಗಳಾಯಿತು. ಪಿಡಬ್ಲುೃಡಿ ಅಧಿಕಾರಿಗಳು-ಗುತ್ತಿಗೆದಾರರ ನಿರ್ಲಕ್ಷೃ ಧೋರಣೆಯಿಂದ ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ವಾಹನಗಳು ಸಂಚರಿಸುವಾಗ ಧೂಳು ಏಳುತ್ತಿದ್ದು, ರಸ್ತೆ ಪಕ್ಕದ ಅಂಗಡಿ, ಮನೆಗಳನ್ನು ಆವರಿಸುತ್ತಿದೆ. ವಾಹನ ಸವಾರರು, ಪಾದಚಾರಿಗಳೂ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಪಟ್ಟಣ ಪಂಚಾಯಿತಿ ಸಹ ಧೂಳು ಏಳದಂತೆ ನೀರು ಸಿಂಪಡಣೆ ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕೋಟಿ ರೂ. ಪೋಲು: ಮುಖ್ಯರಸ್ತೆ ವಿಸ್ತರಣೆಗೂ ಮೊದಲು ಈ ಹಿಂದೆ ಡಿವೈಡರನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಅಪಘಾತಗಳು ಹೆಚ್ಚಿದವು. ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಲಾರಿ, ಬಸ್, ಆಂಬುಲೆನ್ಸ್ ಸೇರಿ ಇತರ ವಾಹನಗಳು ಡಿವೈಡರ್ ಮೇಲೇರಿದ ಉದಾಹರಣೆಗಳಿವೆ. ಇದೀಗ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿದ್ದರಿಂದ ಡಿವೈಡರ್ ಸೇರಿ ಎಲ್ಲ ತೆರವುಗೊಳಿಸಲಾಗಿದ್ದು, ಒಂದು ಕೋಟಿ ರೂ. ಪೋಲು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕವಿತಾಳದಲ್ಲಿ ಮುಖ್ಯರಸ್ತೆ ಕಾಮಗಾರಿ ಆರು ತಿಂಗಳಿನಿಂದ ನನೆಗುದಿಗೆ ಬಿದ್ದಿದೆ. 21 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಡಾಂಬರೀಕರಣ, ಡಿವೈಡರ್, ಬೀದಿದೀಪ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಆದರೆ, ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. | ಆದಪ್ಪ ಭೀಮ್ ಆರ್ಮಿ ಹೊಬಳಿ ಘಟಕ ಅಧ್ಯಕ್ಷ, ಕವಿತಾಳ. ಮುಖ್ಯರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಬೇಗ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಮತ್ತೆ ಸಭೆ ನಡೆಸಿ ಸೂಚನೆ ನೀಡಲಾಗುವುದು. | ಖಾಸಿಂಬೀ ಚಾಂದ್‌ಪಾಷಾ ಅಧ್ಯಕ್ಷೆ, ಕವಿತಾಳ ಪಪಂ ಉದ್ದೇಶಪೂರ್ವಕವಾಗಿ ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಳಿಸಿಲ್ಲ. ರಸ್ತೆ ಪಕ್ಕದಲ್ಲಿ 15 ಮರಗಳ ತೆರವುಗೊಳಿಸಬೇಕಿದೆ. ಈ ಸಂಬಂಧ ಅನುಮತಿ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಪರವಾನಗಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು. | ಶ್ಯಾಮಲಪ್ಪ ಇಂಜಿನಿಯರ್, ಪಿಡಬ್ಲುೃಡಿ, ಮಾನ್ವಿ