

ಕವಿತಾಳ: ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹತ್ತಿರದ ಸರ್ವೇ ನಂ. 19/2 ರಲ್ಲಿನ 2.30 ಎಕರೆ ಮತ್ತು ಸರ್ವೇ ನಂ. 19/3 ರಲ್ಲಿ ಮೂರು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಕೆಕೆಆರ್‌ಡಿಬಿ ಯೋಜನೆಯಡಿ ಎರಡು ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಫೆ.18ರಂದು ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದ್ದರು. ಕಂದಾಯ ಅಧಿಕಾರಿಗಳು ಸರ್ವೇ ನಂ. 19/2 ರಲ್ಲಿನ 2.30 ಎಕರೆ ಮತ್ತು ಸರ್ವೇ ನಂ. 19/3 ರಲ್ಲಿ ಮೂರು ಎಕರೆ ಜಾಗವನ್ನು ಪರಿಶೀಲಿಸಿಯೇ ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಹೀಗಾಗಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು. ಆದರೆ, ಈಗ ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ತೆಗೆದಿದ್ದಾರೆ. ಆ ಐದು ಎಕರೆ ಜಾಗ ಇಲಾಖೆಗೆ ಸೇರಿದ್ದು ಕ್ರೀಡಾಂಗಣ ನಿರ್ಮಿಸಲು ಅವಕಾಶವಿಲ್ಲ ಎಂದು ತಗಾದೆ ತೆಗೆದ ಕಾರಣ ಕಾಮಗಾರಿ ನನೆಗುದಿಗೆ ಬೀಳಲು ಕಾರಣವಾಗಿದೆ. ಇದರಿಂದ ಬೇಸರಗೊಂಡ ಕ್ರೀಡಾಭಿಮಾನಿಗಳು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಮಧ್ಯಪ್ರವೇಶಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕ್ರೀಡಾಭಿಮಾನಿಗಳಾದ ಸುರೇಶ, ರಿಯಾಜ್, ಸಂತೋಷ ಕಲಶೆಟ್ಟಿ, ಮಂಜುನಾಥ, ದಸ್ತಗೀರ್‌ಸಾಬ್, ಎಂ.ಡಿ ರಫಿ ಎಚ್ಚರಿಸಿದ್ದಾರೆ.
ಕವಿತಾಳ ಜಿಲ್ಲೆಯಲ್ಲಿಯೇ ದೊಡ್ಡ ಪಟ್ಟಣವಾಗಿದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವರು, ಶಾಸಕರು ಚಾಲನೆ ನೀಡಿದ ನಂತರ ಖುಷಿಯಾಯಿತು. ಆದರೆ, ಇದೀಗ ಕಾಮಗಾರಿ ಆರಂಭಿಸಿದ ಬಳಿಕ ಅರಣ್ಯ ಇಲಾಖೆಯವರು ಇಲ್ಲಸಲ್ಲದ ತಗಾದೆ ತೆಗೆದಿರುವುದು ಸರಿಯಲ್ಲ. ಜನಪ್ರತಿನಿಗಳು, ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಪರಿಹರಿಸಬೇಕು. ಸುರೇಶ ಕ್ರೀಡಾಪಟು, ಕವಿತಾಳ ಕವಿತಾಳ ಪಟ್ಟಣದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಅರಣ್ಯ ಇಲಾಖೆಯವರು ತಕರಾರು ತೆಗೆದ ಕಾರಣ ಕ್ರೀಡಾಂಗಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಶಾಮಲಪ್ಪ ಜೆಇ, ಪಿಡಬ್ಲುೃಡಿ, ಮಾನ್ವಿ ಕವಿತಾಳದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಲು ಬರಲ್ಲ. ಒಂದು ವೇಳೆ ಬೇರೆ ಸರ್ಕಾರಿ ಭೂಮಿ ಇರದಿದ್ದರೆ ಜಿಲ್ಲಾಧಿಕಾರಿ ಸೂಚನೆ ನೀಡಿದಲ್ಲಿ ಇಲಾಖೆ ಜಾಗ ನೀಡಲಾಗುವದು. ಬೇರೆ ಸರ್ಕಾರಿ ಜಾಗ ಇದ್ದಲ್ಲಿ ಅರಣ್ಯ ಇಲಾಖೆಯ ಭೂಮಿ ನೀಡಲು ಬರುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು. ಪ್ರವೀಣ ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಯಚೂರು