

ಕವಿತಾಳ: ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಬೆಂಚಮರಡಿ ಗ್ರಾಮ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ ಸರಿಯಾದ ರಸ್ತೆಗಳು ಕೂಡ ಇಲ್ಲ.
ಗ್ರಾಮದಲ್ಲಿ ಕೆಲಸ ಸಿಗದ ಕಾರಣಕ್ಕೆ ಅನೇಕರು ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ಇದರಿಂದಾಗಿ ಬಹಳಷ್ಟು ಮನೆಗಳಿಗೆ ಬೀಗ ಹಾಕಿರುವುದು ಕಂಡುಬರುತ್ತದೆ. ಹಳೆಯ ಶಾಲೆ ಕಟ್ಟಡ ಮತ್ತು ಹಿಲಾಲಪೂರ ಕ್ರಾಸ್‌ನಲ್ಲಿ ಕಲುಷಿತ ನೀರು ನಿಲ್ಲುತ್ತಿರುವುದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ.
ಅನೇಕರು ಸ್ವಂತ ಮನೆಯಿಲ್ಲದರಿವುದರಿಂದ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯಿದ್ದು, ಶಿಕ್ಷಕರ ಕೊರತೆಯಿದೆ. ಜನರು ಅನಾರೋಗ್ಯ ಪೀಡಿತರಾದರೆ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯಿದ್ದು, ಒಂದು ಕೊಡ ನೀರಿಗೂ ಜನರು ಪರದಾಡುವಂತಾಗಿದೆ.
ಬೆಂಚಮರಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಗ್ರಾಪಂ ಸದಸ್ಯರಾದ ಶರಣಪ್ಪ ಹಳ್ಳಿ, ಶಂಕುತಲಾ, ಗ್ರಾಮಸ್ಥರಾದ ಮೌನೇಶ ಚಲುವಾದಿ, ರಾಘವೇಂದ್ರ, ಶುಕಮುನಿ, ಮಲ್ಲಯ್ಯ ಅಮರೇಶಪ್ಪ ಒತ್ತಾಯಿಸಿದ್ದಾರೆ.