ನಾಲೆಗೆ ಸಮರ್ಪಕ ನೀರು ಹರಿಸದಿದ್ದರೆ ಕ್ರಮ

21.ktal.02
Published on

ಕವಿತಾಳ: ತುಂಗಭದ್ರಾ ನಾಲೆಗೆ ಸಮರ್ಪಕ ನೀರು ಹರಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ವಿ ಶಾಸಕ ರಾಜ ವೆಂಕಟಪ್ಪನಾಯಕ ಎಚ್ಚರಿಸಿದರು.

ಸಿರವಾರ ತಾಲೂಕು ಬಾದರದಿನ್ನಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಲೆಗೆ ಸಮಪರ್ಕವಾಗಿ ನೀರು ಹರಿಸುತ್ತಿಲ್ಲ. ಇದರಿಂದ ಸಾಲ ಮಾಡಿ ನಾಟಿ ಮಾಡಿರುವ ಭತ್ತ ಫಸಲು ಒಣಗುತ್ತಿದೆ ಎಂದು ರೈತರಾದ ಬಸವರಾಜ ಗೊಲದಿನ್ನಿ, ವೆಂಕಟೇಶ ಶಂಕ್ರಿ ಇತರರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಥಳದಲ್ಲಿದ್ದ ನಿರಾವರಿ ಅಧಿಕಾರಿ ವಿಜಯಲಕ್ಷ್ಮೀಗೆ ರೈತರ ಸಮಸ್ಯೆಗೆ ಸರಿಯಾಗಿ ಸ್ಪಂದಿಸಬೇಕು. ನಾಲೆಗೆ ಸಮರ್ಪಕ ನೀರು ಹರಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಸರಿಗೆ ಮಾತ್ರ ಸಭೆ ನಡೆಸಲಾಗುತ್ತಿದೆ. ಈ ಮೊದಲು ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಹೊಲದ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದರೂ ಈವರೆಗೆ ಕೆಲಸವಾಗಿಲ್ಲವೆಂದು ಕರಿಲಿಂಗಪ್ಪ ಹಿರೆಬಾದದಿನ್ನಿ, ತಿಪ್ಪಣ್ಣ ಬಾಗಲವಾಡ, ಶರಣಪ್ಪ ಗೊಲದಿನ್ನಿ ಆರೋಪಿಸಿದರು.

ಸಭೆಯ ನಂತರ ವಿವಿಧ ಫಲನುಭವಿಗಳಿಗೆ ಸೌಲಭ್ಯಗಳ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು. ತಹಸೀಲ್ದಾರ್ ವಿಜಯೇಂದ್ರ ಹುಲಿನಾಯಕ, ಗ್ರಾಪಂ ಅಧ್ಯಕ್ಷೆ ಲಲಿತಾ, ಡಾ ಶರಣಬಸವ ಬಾಗಲವಾಡ, ಸಿರವಾರ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೆನ್ನಪ್ಪ ಕರಿಬಂಟ, ಪಿಎಸ್‌ಐ ಸದ್ದಾಂಹುಸೇನ್, ಸಿಡಿಪಿಒ ಮುದುಕಪ್ಪ ಸಜ್ಜನ, ಕಂದಾಯ ನಿರೀಕ್ಷಕರಾದ ಶಕೀಲ್ ಅಹ್ಮದ್, ರಾಜಕುಮಾರ ಮಲ್ಲಟ, ಗ್ರಾಮ ಲೆಕ್ಕಾಧಿಕಾರಿಗಳಾದ ಸದಾಕಲಿ, ಅನೀಲ್‌ಕುಮಾರ, ರಮೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net