

ಕವಿತಾಳ: ಸಮೀಪದ ನೆಲಕೋಳ ಗ್ರಾಮಸ್ಥರು ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಅಮೀನಗಡ ಗ್ರಾಪಂ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಳೆದೊಂದು ವಾರದಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಅವರ ಗಮನಕ್ಕೆ ತಂದರೂ ನಿರ್ಲಕ್ಷೃ ಮಾಡುತ್ತಿದ್ದಾರೆ. ಇರಕಲ್ ಕೆರೆಯ ನೀರು ಬಿಡಲಾಗುವುದು ಎಂದು ಹೇಳಿದ್ದು, ಈವರೆಗೆ ಬಂದಿಲ್ಲ. ಖಾಸಗಿಯವರ ಕೊಳವೆಬಾವಿ ಬತ್ತಿದ್ದರಿಂದ ಪರದಾಡುವಂತಾಗಿದೆ. ಕುಡಿವ ನೀರಿನ ಸಮಸ್ಯೆ ಪರಿಹರಿಸುವವರಿಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷೆ ಬಸವಲಿಂಗಮ್ಮ ಮತ್ತು ಪಿಡಿಒ ಮಲ್ಲಯ್ಯ ಮಾತನಾಡಿ, ನೆಲಕೋಳ ಗ್ರಾಮದಲ್ಲಿರುವ ಕುಡಿವ ನೀರಿನ ಸಮಸ್ಯೆಯನ್ನು ವಾರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಹೋರಾಟ ಕೈಬಿಟ್ಟರು. ಗ್ರಾಪಂ ಉಪಾಧ್ಯಕ್ಷ ಗಂಗಮ್ಮ, ಮಾಜಿ ಅಧ್ಯಕ್ಷ ಮೌನೇಶ ದೊಡ್ಡಮನಿ, ನೆಲಕೋಳ ಗ್ರಾಮಸ್ಥರಾದ ಕಳಕಪ್ಪ ನಾಯಕ, ಅಬ್ದುಲ್, ರಾಜಾಸಾಬ್, ಶಿವಣ್ಣ, ಮೌಲಸಾಬ್, ಶಿವಪ್ಪ, ಅಜ್ಮೀರ್, ರಂಗಪ್ಪ, ಮಂಜುನಾಥ, ದಾದಾಪೀರ್, ಬಂದೇನವಾಜ್, ಮೌನೇಶ ಇತರರಿದ್ದರು.