

ಕವಿತಾಳ: ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಸ್ಥಳೀಯ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ 2.5 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಕವಿತಾಳದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು, 25 ಕೋಟಿ ರೂಪಾಯಿ ವೆಚ್ಚದಲ್ಲಿ ಪದವಿ ಕಾಲೇಜು, ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಸಿರವಾರ ಪಪಂ ಅಧ್ಯಕ್ಷ ಭೂಪನಗೌಡ, ಪ್ರಮುಖರಾದ ಶಿವಣ್ಣ ವಕೀಲ, ಕಿರಿಲಿಂಗಪ್ಪ, ಶ್ರೀಶೈಲಪ್ಪ ಬಡಿಗೇರ, ಚಾಂದ್‌ಪಾಷಾ, ಶೇಖರಪ್ಪ ಹಟ್ಟಿ, ರಾಜು ಬನ್ನಿಗಿಡದ, ಶರಣಬಸವ ಹಣಗಿ, ಫರೀದುಲ್ಲಾ ಇನಾಂದಾರ್ ಇದ್ದರು.