ಶುದ್ಧ ನೀರಿಗಾಗಿ ಜನರು ಪರದಾಟ

Untitled design (7)
Published on

ಕವಿತಾಳ: ಸಮೀಪದ ಇರಕಲ್ ಹತ್ತಿರ ಶುದ್ಧ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ್ದರೂ ನಾಲ್ಕು ಗ್ರಾಪಂ ನಿರ್ಲಕ್ಷೃದಿಂದ ಸಾರ್ವಜನಿಕರಿಗೆ ಜೀವಜಲಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ.

ಅಮೀನಗಡ, ವಟಗಲ್, ಪಾಮನಕಲ್ಲೂರು, ಹಾಲಪೂರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 25 ಎಕರೆಯಲ್ಲಿ 2018ರಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೆರೆಯನ್ನು ಭರ್ತಿ ಮಾಡಲಾಗಿದೆ. ಆದರೆ, ಪಂಚಾಯಿತಿಗಳ ಬೇಜವಾಬ್ದಾರಿತನದಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ತಲುಪದಂತಾಗಿದೆ.

ಶುದ್ಧ ಕುಡಿಯುವ ನೀರಿಗಾಗಿ ಐಯರು ಜಾಕ್‌ವೆಲ್‌ನಿಂದ ಏರ್‌ಟವರ್‌ಗೆ ನೀರನ್ನು ಶುದ್ಧವಾಗಿರಿಸಲು ಆರು ಪಿಲ್ಟರ್‌ಗಳ ಮುಖಾಂತರ ನೀರನ್ನು ಹಾಯಿಸುವ ಯೋಜನೆ ರೂಪಿಸಲಾಗಿದೆ. ಇವುಗಳಲ್ಲಿ ಈಗ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಂದ ಪಂಪ್‌ಹೌಸ್ ಮುಖಾಂತರ ಇರಕಲ್ ಮತ್ತು ಪಾಮನಕಲ್ಲೂರುಗಳ ಮೇನ್ ಬ್ಯಾಲೇನ್ಸ್ ಟ್ಯಾಂಕ್‌ಗೆ ನೀರು ಸಂಗ್ರಹಿಸುವ ಕಾಮಗಾರಿ ಮಾಡಲಾಗಿದೆ. ಇರಕಲ್‌ನ ಕೆರೆಯಿಂದ ಮೇನ್ ಬ್ಯಾಲೇನ್ಸ್ ನೀರಿನ ಟ್ಯಾಂಕ್ ಮೂಲಕ ಹಾಲಪೂರ ಪಂಚಾಯಿತಿ ವ್ಯಾಪ್ತಿಯ ಜಂಗಮರಹಳ್ಳಿ, ಯದ್ದಲದಿನ್ನಿ, ಹಂಚಿನಾಳ, ಹಂಚಿನಾಳ ಕ್ಯಾಂಪ್, ಜೋಳದರಾಶಿ ಕ್ಯಾಂಪ್ ಸೇರಿ ಎಲ್ಲ ಗ್ರಾಮಗಳಿಗೆ ನೀರು ಪೂರೈಸಬೇಕಾಗಿದೆ. ಇದು ಯಾವ ಕಾರ್ಯವಾಗಿಲ್ಲ.

ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಗೆ ಗುಡಿಹಾಳ, ಚಿಲ್ಕರಾಗಿ, ಆನಂದಗಲ್, ಹಿಲಾಲಪೂರ, ಬೆಂಚಮರಡಿ, ಇರಕಲ್ ಗ್ರಾಮಗಳು ಬರುತ್ತವೆ. ಈ ಗ್ರಾಮಗಳಿಗೆ ನೀರು ಪೂರೈಸಲು ಇರಕಲ್‌ನಲ್ಲಿ 3 ಲಕ್ಷ 50 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಇದ್ದರೂ ಜನರಿಗೆ ಶುದ್ಧ ನೀರಿನ ಬವನೆ ತಪ್ಪಿಲ್ಲ.

ಪಾಮನಕಲ್ಲೂರು ಮೇನ್ ಬ್ಯಾಲೇನ್ಸ್ ವ್ಯಾಪ್ತಿಗೆ ಹರ‌್ವಪೂರ, ತುಪ್ಪದೂರು, ಅಮೀನಗಡ ಪಂಚಾಯಿತಿ ವ್ಯಾಪ್ತಿಯ ಕೊಟೆಕಲ್, ಯತಗಲ್, ಕಾಚಪೂರ, ವಟಗಲ್ ಪಂಚಾಯಿತಿ ವ್ಯಾಪ್ತಿಯ ಯಕ್ಲಸಪೂರ, ಪರಸಪೂರ ಗ್ರಾಮಗಳು ಬರುತ್ತಿವೆ. ಪಾಮನಕಲ್ಲೂರು ಟ್ಯಾಂಕ್‌ನ ಸಾಮರ್ಥ್ಯ 1 ಲಕ್ಷ 50 ಸಾವಿರ ಲೀಟರಿದ್ದು ಇರಕಲ್ ಕೆರೆಯಿಂದ ನೇರವಾಗಿ ಪೈಪ್‌ಲೈನ್ ಮುಖಾಂತರ ಆನಂದಗಲ್‌ನ ಸಂಪ್‌ಗೆ ಸರಬರಾಜು ಮಾಡಿ ನಂತರ ಇಲ್ಲಿಂದ ಪಾಮನಕಲ್ಲೂರು ಮೇನ್ ಬ್ಯಾಲೇನ್ಸ್‌ಗೆ ತುಂಬಿಸುವ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net